ಕರ್ನಾಟಕದ ಜನತೆ ರಾಜ್‌ಕಪೂರ್ ಕುಟುಂಬವನ್ನು ಬೆಳೆಸಿದೆ : ಕರೀನಾ ಕಪೂರ್
10ನೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ದೂರಿ ಚಾಲನೆ

ಬೆಂಗಳೂರು, ಫೆ.22: ಜಗಮಗಿಸುವ ಆಲಂಕಾರಿಕ ವಿದ್ಯುತ್ ದೀಪಗಳು, ಡೊಳ್ಳುಕುಣಿತ, ಜನಪದ ಹಾಡು ಹಾಗೂ ಸಾಂಪ್ರದಾಯಿಕ ನೃತ್ಯಗಳ ನಡುವೆ ಹತ್ತನೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ದೊರೆಯಿತು.
ಗುರುವಾರ ಆಲಂಕಾರಿಕ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ವಿಧಾನಸೌಧದ ಮುಂಭಾಗ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಬಾಲಿವುಡ್ ಸಿನೆಮಾ ತಾರೆ ಕರೀನಾ ಕಪೂರ್, ಇರಾನಿ ನಟಿ ಘತೇಮೇ ಮೋಟಮೆಡ್ ಆಯ್ ಹಾಗೂ ಫ್ರೆಂಚ್ ಚಿತ್ರ ನಿರ್ದೇಶಕ ಮಾರ್ಕ್ ಭಾಷೆಟ್ ಸೇರಿದಂತೆ ಪ್ರಮುಖ ಗಣ್ಯರು ಸಿನಿಮೋತ್ಸವವನ್ನು ಉದ್ಘಾಟಿಸಿದರು.
ಬಳಿಕ ಸಿನಿಮೋತ್ಸವ ಉದ್ದೇಶಿಸಿ ಮಾತನಾಡಿದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಸಿನೆಮಾ ನನ್ನ ರಕ್ತದಲ್ಲಿ ಹರಿಯುತ್ತಿದೆ. ನನ್ನ ಉಸಿರು, ಪ್ಯಾಷನ್ ಎಲ್ಲವೂ ಸಿನಿಮಾವೆ ಆಗಿದೆ. ಸಿನಿಮಾ ಸಂಸ್ಕೃತಿ ಜಾತಿ, ಧರ್ಮ, ಭಾಷೆ ಹಾಗೂ ಗಡಿಗಳ ಚೌಕಟ್ಟನ್ನು ಮೀರಿದ್ದಾಗಿದೆ. ಅದಕ್ಕೆ 10ನೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಜನತೆ ರಾಜ್‌ಕಪೂರ್ ಕುಟುಂಬವನ್ನು ಬೆಳೆಸಿದೆ. ಹೀಗಾಗಿ, ನಾನು ಕರ್ನಾಟಕವನ್ನು ಪ್ರೀತಿಸುತ್ತೇನೆ. ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಕನ್ನಡ ಸಿನೆಮಾದಲ್ಲಿ ನಟಿಸಲು ಬಯಸುತ್ತೇನೆ. ಆ ಮೂಲಕ ಈ ರಾಜ್ಯದ ಮೇಲಿನ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆಂದು ತಿಳಿಸಿದರು.
ಫ್ರೆಂಚ್ ಸಿನೆಮಾ ನಿರ್ದೇಶಕ ಮಾರ್ಕ್ ಭಾಷೆಟ್ ಮಾತನಾಡಿ, ನಾನು ಜಗತ್ತಿನ ಹಲವು ಸಿನೆಮೋತ್ಸವಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ರಾಜ್ಯ ಸರಕಾರವೆ ಮುಂದೆ ನಿಂತು ವ್ಯವಸ್ಥೆ ಮಾಡಿರುವುದು ಮೆಚ್ಚುಗೆಯ ವಿಷಯವಾಗಿದೆ. ಹೀಗೆ, ಸಿನೆಮಾ ಸಂಸ್ಕೃತಿ ಸದಾ ಬೆಳಗುತ್ತಿರಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿ ಪ್ರಮುಖರು ಉಪಸ್ಥಿತರಿದ್ದರು.







