ಅಕ್ರಮ ವಲಸಿಗರು ಮತದಾನ ಮಾಡಿದರೆ ಕಾನೂನು ಕ್ರಮ: ರಾಮಲಿಂಗಾರೆಡ್ಡಿ

ಬೆಂಗಳೂರು, ಫೆ.22: ರಾಜ್ಯಕ್ಕೆ ಆಗಮಿಸಿರುವ ಅಕ್ರಮ ವಲಸೆಗಾರರು ಚುನಾವಣೆಯಲ್ಲಿ ಮತದಾನ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಲಸೆಗಾರರ ಆಧಾರ ಕಾರ್ಡ್‌ಗಳನ್ನು ಪರಿಶೀಲನೆ ಮಾಡುವಂತೆ ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ 363 ಮಂದಿ ಅಕ್ರಮ ವಲಸೆಗಾರರನ್ನು ಪತ್ತೆಹಚ್ಚಲಾಗಿದೆ. ಬೆಂಗಳೂರು ನಗರದಲ್ಲಿ 214 ಮಂದಿ, ಮೈಸೂರಿನಲ್ಲಿ 25, ವಿಜಯಪುರದಲ್ಲಿ 33, ಬೆಂಗಳೂರು ಜಿಲ್ಲೆಯಲ್ಲಿ 17 ಮಂದಿ ಸೇರಿದಂತೆ, 363 ಮಂದಿ ವಲಸೆಗಾರರನ್ನು ಪತ್ತೆಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಬಾಂಗ್ಲಾ ದೇಶದಿಂದಲೇ ಅತಿಹೆಚ್ಚಿನ ವಲಸೆಗಾರರು ರಾಜ್ಯಕ್ಕೆ ಬರುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚಲು ಎಲ್ಲ ನಗರ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಅವರನ್ನು ಪೊಲೀಸರ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.





