ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಹತ್ಯೆ ಪ್ರಕರಣ: ಮತ್ತೆ ಮೂವರ ಬಂಧನ

ಮಂಗಳೂರು, ಫೆ. 22: ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪಾಂಡೇಶ್ವರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಉಳ್ಳಾಲ ಬೊಟ್ಟು ಧರ್ಮನಗರದ ದಾವೂದ್ (38), ಮಂಜೇಶ್ವರದ ಉದ್ಯಾವರ ನಿವಾಸಿ ಮುಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ನಾಚಿ (25), ಮಂಜೇಶ್ವರದ ಮಚ್ಚಂಪಾಡಿಯ ರಿಯಾಝ್ ಎ. ಯಾನೆ ರಿಯಾ ಯಾನೆ ಇಯ್ಯಾ (32) ಬಂಧಿತ ಆರೋಪಿಗಳು.
ಆರೋಪಿ ದಾವೂದ್ ಈ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮುಹಮ್ಮದ್ ನಾಸಿರ್ ಹಾಗೂ ರಿಯಾಝ್ ಕೊಲೆ ನಡೆಸಿದ ಆರೋಪಿಗಳಿಗೆ ಆಶ್ರಯ ಹಾಗೂ ಹಣಕಾಸು ನೀಡಿ ಸಹಕರಿಸಿದ್ದಾರೆ. ಆರೋಪಿ ದಾವೂದ್‌ನ ಮೇಲೆ ಇಲ್ಯಾಸ್ ಕೊಲೆ ಪ್ರಕರಣ ಸೇರಿ ಒಟ್ಟು ನಾಲ್ಕು ಕೊಲೆ, ಎರಡು ಕೊಲೆ ಯತ್ನ ಹಾಗೂ ಇತರ ಐದು ಪ್ರಕರಣಗಳು ದಾಖಲಾಗಿವೆ.
ನಾಸಿರ್ ಎಂಬಾತನ ಮೇಲೆ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ಮಹಮ್ಮದ್ ಸಮೀರ್ ಯಾನೆ ಸಮೀರ್ ಮತ್ತು ನಮೀರ್ ಹಂಝ ಎಂಬವರನ್ನು ಬಂಧಿಸಿಸಲಾಗಿದ್ದು, ನ್ಯಾಯಾಂಗ ಬಂಧನಲ್ಲಿದ್ದಾರೆ.





