ಮಾತೃಪೂರ್ಣ ಯೋಜನೆಯ ಮಾರ್ಗಸೂಚಿ ಬದಲಾವಣೆ: ಟಿ.ಬಿ.ಜಯಚಂದ್ರ

ಬೆಂಗಳೂರು, ಫೆ.22: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶ ಯುಕ್ತ ಆಹಾರ ಪೂರೈಸುವ ಮಾತೃಪೂರ್ಣ ಯೋಜನೆಯ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ತರುವ ಸಂಬಂಧ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವಿಶ್ವನಾಥ್ ಚಂದ್ರಶೇಖರ್ ಮಾಮನಿ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಅವರು ಉತ್ತರ ನೀಡಿದರು.
ರಾಜ್ಯದಲ್ಲಿ 5.36 ಲಕ್ಷ ಗರ್ಭಿಣಿಯರು, 5.20 ಲಕ್ಷ ಬಾಣಂತಿಯರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತಿದೆ. ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ 2748 ಮಂದಿ ಗರ್ಭಿಣಿಯರು, 2402 ಬಾಣಂತಿಯರು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಈ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಮಲೆನಾಡು ಪ್ರದೇಶಗಳಲ್ಲಿ ಬಾಣಂತಿಯರು ಹಾಗೂ ಗರ್ಭಿಣಿಯರು 4-5 ಕಿ.ಮೀ ದೂರು ಹೋಗಿ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಊಟ ಮಾಡಿ ಬರುವುದು ಕಷ್ಟಕರವಾದ ಕೆಲಸ. ಆದುದರಿಂದ, ಸರಕಾರ ಈ ಹಿಂದೆ ಇದ್ದ ಪದ್ಧತಿಯಂತೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಅವರ ಮನೆಗಳಿಗೆ ತಲುಪಿಸುವ ಕೆಲಸ ಮಾಡಿದರೆ ಉತ್ತಮ ಎಂದರು.
ಬಿಜೆಪಿ ಸದಸ್ಯ ಜೀವರಾಜ್ ಮಾತನಾಡಿ, ಗರ್ಭಿಣಿಯರು ರಣ ಬಿಸಿಲಿನಲ್ಲಿ ಹೊರಗೆ ಹೋಗಿ ಊಟ ಮಾಡಿಕೊಂಡು ಬರುವುದು ಸರಿಯಲ್ಲ. ಬಾಣಂತಿಯರನ್ನು ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ಕಳುಹಿಸುವುದಿಲ್ಲ. ಅಂತಹದರಲ್ಲಿ ಐದಾರು ಕಿ.ಮೀ. ಹೇಗೆ ಹೊರಗಡೆ ಕಳುಹಿಸುತ್ತಾರೆ ಎಂದರು.
ಅಂಗನವಾಡಿಗೆ ಯಾರೂ ಬರದಿದ್ದರೆ ಬೇಳೆ ಕಾಳುಗಳನ್ನು ಮಾರಾಟ ಮಾಡಿಕೊಳ್ಳಲು ಅನುಕೂಲವಾಗಿರುವ ಈ ಮಾತೃಪೂರ್ಣ ಯೋಜನೆಯು ಭ್ರಷ್ಟಾಚಾರಕ್ಕೆ ಮಾರ್ಗ ಮಾಡಿದಂತಿದೆ. ಸಚಿವರು ಬೋಗಸ್ ಅಂಕಿ-ಅಂಶಗಳನ್ನು ನೀಡುವ ಬದಲು ಸರಿಯಾದ ಮಾಹಿತಿಯನ್ನು ನೀಡಲಿ ಎಂದು ಅವರು ಆಗ್ರಹಿಸಿದರು.







