ಕಪ್ಪುಪಟ್ಟಿ ಧರಿಸಿ ಪಿಯು ಪರೀಕ್ಷೆ: ತಿಮ್ಮಯ್ಯ ಪುರ್ಲೆ
ಬೆಂಗಳೂರು, ಫೆ.22: ಉಪನ್ಯಾಸಕರ ವೇತನ ತಾರತಮ್ಯ ಬಗೆಹರಿಸುವಂತೆ ಒತ್ತಾಯಿಸಿ ಫೆ.26ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಟ್ಟು, ಕಪ್ಪುಪಟ್ಟಿ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘ ತೀರ್ಮಾನಿಸಿದೆ.
ಗುರುವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಕಳೆದ ಹತ್ತು ವರ್ಷಗಳಿಂದ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸುತ್ತ ಬಂದಿದ್ದೇವೆ. ಹೀಗಾಗಿ, ಸರಕಾರ 2011ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ನೇತೃತ್ವದ ಸಮಿತಿಯನ್ನು ನೇಮಿಸಿ ವರದಿಯನ್ನು ಪಡೆದಿತ್ತು. ಆದರೆ, ಸರಕಾರ ಈ ವರದಿಯನ್ನು ಜಾರಿಗೊಳಿಸಲು ವಿಳಂಬ ಅನುಸರಿಸುತ್ತಿದೆ ಎಂದರು.
2017ರಲ್ಲಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆನೀಡಿದಾಗ, ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು ಆದರೆ ಇದುವರೆಗೂ ಈಡೇರಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಅವರಿಗೆ ಗೊಂದಲವಾಗಬಾರದೆಂಬ ಕಾರಣದಿಂದ ಫೆ.26ರಂದು ನಡೆಸಲು ನಿರ್ಧರಿಸಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆದು, ಕಪ್ಪುಪಟ್ಟಿ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಸಂಘ ತೀರ್ಮಾನಿಸಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪ್ರಕಾಶ್, ಶಂಕರ್ ಸೇರಿದಂತೆ ಮತ್ತಿತರರಿದ್ದರು.







