ನಗರಸಭೆ ವಿರುದ್ಧ ಜೆಡಿಎಸ್ ಉಪವಾಸ ಸತ್ಯಾಗ್ರಹ : ಅಧ್ಯಕ್ಷರ ಕಾರ್ಯವೈಖರಿಗೆ ಖಂಡನೆ

ಮಡಿಕೇರಿ,ಫೆ.22 :ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ನಗರದ ಜನತೆಯ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಜಾತ್ಯತೀತ ಜನತಾದಳ ನಗರಸಭೆ ಎದುರು ಉಪವಾಸ ಸತ್ಯಾಗ್ರಹ ನಡೆಸಿತು.
ಸದಸ್ಯರುಗಳ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಅಧ್ಯಕ್ಷರು ಕಚೇರಿಗಷ್ಟೆ ಸೀಮಿತರಾಗಿದ್ದು, ವಾರ್ಡ್‍ಗಳಿಗೆ ಭೇಟಿ ನೀಡುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ, ಕಾಮಗಾರಿಗಳನ್ನು ಪರಿಶೀಲಿಸುತ್ತಿಲ್ಲ, ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಜನಸಾಮಾನ್ಯರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುತ್ತಿಲ್ಲವೆಂದು ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಕುರ್ಚಿಯನ್ನೇ ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿರುವ ನಗರಸಭೆಯ ಅಧ್ಯಕ್ಷರಿಂದ ನಗರಕ್ಕೆ ಯಾವುದೇ ಪ್ರಯೋಜನವಿಲ್ಲ. ಅಧಿಕಾರ ಹಂಚಿಕೊಂಡಿರುವ ಬಿಜೆಪಿ ಉಪಾಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿಯಲ್ಲಿದ್ದರೂ ನಗರದ ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆಗಳು ಕಂಡು ಬರುತ್ತಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಗಣೇಶ್ ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ನಗರಸಭೆಗೆ ವಿಶೇಷ ಅನುದಾನವನ್ನೇನು ಬಿಡುಗಡೆ ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲವೆಂದರು.
ಫಾರಂ ನಂ.3 ರ ಗೊಂದಲ ಮುಂದುವರೆದಿದ್ದು, ಜನನ ಮತ್ತು ಮರಣ ದೃಢೀಕರಣ ಪತ್ರಕ್ಕೂ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಯುಜಿಡಿ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಡೆದಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಅಮಾಯಕರ ಹಾಗೂ ಬಡವರ ಅತಿಕ್ರಮಣಗಳನ್ನು ತೆರವುಗೊಳಿಸಲು ಕಾಳಜಿ ತೋರುವ ನಗರಸಭೆ ಪ್ರಭಾವಿಗಳ ಅಕ್ರಮ ಒತ್ತುವರಿ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗಣೇಶ್ ಪ್ರಶ್ನಿಸಿದರು.
ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ಸ್ಥಳದಲ್ಲಿ ಹಾಜರಿದ್ದು, ನಗರಸಭೆ ಆಡಳಿತ ವೈಖರಿಯನ್ನು ತೀವ್ರವಾಗಿ ಖಂಡಿಸಿದರು. ಮುಂಬರುವ ಚುನಾವಣೆಯಲ್ಲಿ ನಗರದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಲೀಲಾಶೇಷಮ್ಮ, ಮಾಜಿ ಸದಸ್ಯರಾದ ಅಶ್ರಫ್, ಜೆಡಿಎಸ್ ನಗರಾಧ್ಯಕ್ಷರಾದ ಬಿ.ವೈ.ರಾಜೇಶ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ಸುನಿಲ್, ಅಲ್ಪಂಖ್ಯಾತರ ಘಟಕದ ನಗರಾಧ್ಯಕ್ಷರಾದ ಇಬ್ರಾಹಿಂ, ಯುವ ಜೆಡಿಎಸ್ ನಗರಾಧ್ಯಕ್ಷರಾದ ಕಿರಣ್ ರೈ, ಕಾರ್ಯದರ್ಶಿ ಮಂಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







