ಮಡಿಕೇರಿ: ಸ್ಥಗಿತಗೊಳಿಸಿದ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಆಗ್ರಹ

ಮಡಿಕೇರಿ, ಫೆ.23: ಕೊಡಗು ವಿಶೇಷ ಪ್ಯಾಕೇಜ್‍ನಡಿ ಹಾಕತ್ತೂರು ಗ್ರಾಮ ಪಂಚಾಯತ್ ಗೆ ಮಂಜೂರಾದ 44 ಲಕ್ಷ ರೂ.ನ ಕಾಮಗಾರಿಗಳ ಪೈಕಿ 15 ಲಕ್ಷದ ಕಾಮಗಾರಿಗಳನ್ನು ಯಾವುದೇ ಮಾಹಿತಿ ನೀಡದೆ ಇಂಜಿನಿಯರ್ ಗಳು ಕೈಬಿಟ್ಟಿರುವುದಾಗಿ ಆರೋಪಿಸಿರುವ ಪಂಚಾಯತ್ ಸದಸ್ಯ ಪಿಯೂಸ್ ಫೆರೆರಾ, ಮುಂದಿನ ನಾಲ್ಕು ದಿನಗಳ ಒಳಗಾಗಿ ನ್ಯಾಯ ಒದಗಿಸಿಕೊಡದಿದ್ದಲ್ಲಿ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು. ಹಾಕತ್ತೂರು ಪಂಚಾಯತ್ ವ್ಯಾಪ್ತಿಯ ಮೋಟಯ್ಯನವರ ಮನೆ ಎದುರಿನ ರಸ್ತೆಗೆ ಮೋರಿ ನಿರ್ಮಾಣ, ಹೂಕಾಡು ಅಂಗನವಾಡಿಯಿಂದ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ, ಮಂದ್ರೀರ ತಿಮ್ಮಯ್ಯ-ಬೋಪಣ್ಣ ಕುಟುಂಬಸ್ಥರ ರಸ್ತೆ, ಚೂರುಕಾಡು ಅಲ್ಪಸಂಖ್ಯಾತರ ಕಾಲೋನಿ ರಸ್ತೆ, ತೊಂಭತ್ತುಮನೆ ಕಾಲೋನಿಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆ, ಹುಲಿತಾಳ ಪುಚಾರಿ ರಸ್ತೆ ಅಭಿವೃದ್ಧಿ, ಕಗ್ಗೋಡ್ಲು ಕೋಲೆಯಂಡ ಕುಟುಂಬಸ್ಥರ ರಸ್ತೆ, ಕುಂಜಿಲನ ಮಂದ್ರೀರ ಹುಸೈನ್ ಕುಟುಂಬಸ್ಥರ ರಸ್ತೆ, ಮಂದ್ರೀರ ತಿಮ್ಮಯ್ಯ ಬೋಪಣ್ಣ ಕುಟುಂಬಸ್ಥರ ರಸ್ತೆ, ಹೂಕಾಡು ಅಂಗನವಾಡಿಯಿಂದ ಪರಿಶಿಷ್ಟ ಕಾಲೋನಿಗೆ ತೆರಳುವ ರಸ್ತೆ ಹಾಗೂ ಹಾಕತ್ತೂರು ಈಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 44 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಈ ಕಾಮಗಾರಿಗಳಿಗೆ ವಿಧಾನಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ಶಿಲಾನ್ಯಾಸ ನೆರವೇರಿಸಿದ್ದರು ಎಂದು ಪಿಯೂಸ್ ಫೆರೆರಾ ತಿಳಿಸಿದರು.
ಆದರೆ ಇದೀಗ ಇತರ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದರೂ, ತಲಾ 5 ಲಕ್ಷ ವೆಚ್ಚದ ಹಾಕತ್ತೂರು ಗ್ರಾಮದ ಮೋಟಯ್ಯನವರ ಮನೆಯ ಮುಂದಿರುವ ರಸ್ತೆಗೆ ಮೋರಿ ನಿರ್ಮಾಣ, ಕಗ್ಗೋಡ್ಲು ಗ್ರಾಮದ ಹೂಕಾಡು ಅಂಗನವಾಡಿಯಿಂದ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ನಿರ್ಮಾಣ ಹಾಗೂ ಕಗ್ಗೋಡ್ಲು ಗ್ರಾಮದ ಮಂದ್ರೀರ ತಿಮ್ಮಯ್ಯ ಹಾಗೂ ಬೋಪಣ್ಣ ಕುಟುಂಬದ ರಸ್ತೆ ಕಾಮಗಾರಿಯನ್ನು ಇಂಜಿನಿಯರ್ ಚೆನ್ನಕೇಶವ ಅವರು ಕೈಬಿಟ್ಟಿದ್ದಾರೆ. ಈ ಕುರಿತು ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಅವರುಗಳಿಗೆ ದೂರು ನೀಡಲಾಗಿದೆ. ಈ ಕಾಮಗಾರಿಗಳನ್ನು ತಕ್ಷಣ ಆರಂಭಿಸುವಂತೆ ಆದೇಶಿಸಿದ್ದರೂ, ಇದೀಗ ಇಂಜಿನಯರ್ ಒಬ್ಬರು ಈ ಕಾಮಗಾರಿ ನಿರ್ವಹಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದಿನ ನಾಲ್ಕು ದಿನಗಳ ಒಳಗಾಗಿ ಸಂಬಂಧಿಸಿದವರು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿಸಿದ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೂತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂದ್ರೀರ ತನೋಜ್ ಬೋಪಣ್ಣ, ಕಾರ್ಯದರ್ಶಿ ಎಂ.ಡಿ.ಸತೀಶ್ ಹಾಜರಿದ್ದರು.







