ಸಯನೈಡ್ ಹಂತಕ ಮೋಹನ್ ವಿರುದ್ಧ ಮತ್ತೊಂದು ಪ್ರಕರಣ ಸಾಬೀತು
ಫೆ. 24ರಂದು ಶಿಕ್ಷೆ ಪ್ರಕಟ

ಮಂಗಳೂರು, ಫೆ. 23: ಯುವತಿಯರ ಸರಣಿ ಹಂತಕ ಸಯನೈಡ್ ಕಿಲ್ಲರ್ ಮೋಹನ್ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಐದನೇ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತುಗೊಂಡಿದ್ದು, ಶಿಕ್ಷೆಯ ಪ್ರಮಾಣವನ್ನು ಫೆ. 24ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
ಬೆಳ್ತಂಗಡಿ ಮೇಗಿನ ಮಾಲಾಡಿ ನಿವಾಸಿ ಯಶೋಧ (28) ಎಂಬವರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಾಬೀತುಗೊಂಡಿದ್ದು, ಶನಿವಾರ ಶಿಕ್ಷೆ ಪ್ರಕಟಿಸು ವುದಾಗಿ ನ್ಯಾಯಾಲಯ ತಿಳಿಸಿದೆ.
ಯಶೋಧರ ಜೊತೆಗೆ ಸಲುಗೆ ಬೆಳೆಸಿಕೊಂಡ ಮೋಹನ್ ಕುಮಾರ್, ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಹೇಳಿಕೊಂಡಿದ್ದ. ಆಕೆಯನ್ನು ಮದುವೆ ಯಾಗುವುದಾಗಿ ನಂಬಿಸಿ ಚಿನ್ನಾಭರಣದೊಂದಿಗೆ ತನ್ನ ಜೊತೆಗೆ ಬರುವಂತೆ ತಿಳಿಸಿದ್ದ. ಅದರಂತೆ ಆಕೆ 2009 ಸೆ.24ರಂದು ಮನೆ ಮಂದಿಗೆ ಹೇಳದೆ ಮೋಹನ್ ಜೊತೆಗೆ ಹಾಸನಕ್ಕೆ ತೆರಳಿದ್ದರು.
ಹಾಸನದಲ್ಲಿ ಲಾಡ್ಜ್ ಮಾಡಿ ಅಲ್ಲಿ ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಬರೆಸಿದ್ದ. ಅಲ್ಲದೆ ಆಕೆಯ ಮೊಬೈಲ್ ಸಂಖ್ಯೆಯನ್ನು ನೀಡಿದ್ದ. ಆಕೆಯ ಮನೆಗೆ ಫೋನಾಯಿಸಿದ ಮೋಹನ್ ಕುಮಾರ್, ನಾನು ಮತ್ತು ಯಶೋಧ ವಿವಾಹವಾಗಿದ್ದು, ಇನ್ನು ಎರಡು ದಿನ ಕಳೆದು ಬರುವುದಾಗಿ ಹೇಳಿದ್ದ. ರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಮೋಹನ್ ಕುಮಾರ್, ಮರುದಿನ ಬೆಳಗ್ಗೆ ಆಕೆಯನ್ನು ಹಾಸನ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ. ಗರ್ಭ ಧರಿಸಿದರೆ ತೊಂದರೆಯಾಗುವುದಾಗಿ ತಿಳಿಸಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ಸಯನೈಡ್ನ್ನು ನೀಡಿದ್ದ. ಅದನ್ನು ಶೌಚಾಲಯದಲ್ಲಿ ಸೇವಿಸುವಂತೆ ಸೂಚಿಸಿದ್ದ. ಅದರಂತೆ ಆಕೆ ಶೌಚಾಲಯದಲ್ಲಿ ಸಯನೈಡ್ ತಿಂದು ಅಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದರು. ಈ ರೀತಿ ಸಯನೈಡ್ ನೀಡಿ ಮಹಿಳೆಯರನ್ನು ಕೊಲೆ ಮಾಡುತ್ತಿದ್ದ ಆತ ಕುತ್ತಿಗೆಗೆ ಮಾಂಗಲ್ಯ ಸರವನ್ನು ಧರಿಸುವಂತೆ ಹೇಳಿ, ತನಿಖೆ ನಡೆಸುವ ಪೊಲೀಸರ ದಾರಿಯನ್ನು ತಪ್ಪಿಸುತ್ತಿದ್ದ. ತನಿಖೆಯ ವೇಳೆ ಪೊಲೀಸರು ಈ ಕೊಲೆಗಳನ್ನು ದಾಂಪತ್ಯ ವಿರಸದ ಪ್ರಕರಣವಾಗಿ ತಿಳಿಯುವಂತೆ ಆತ ಕುತಂತ್ರ ರೂಪಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಒಟ್ಟು 39 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ 43 ಪ್ರಬಲ ಸಾಕ್ಷಿ, 48 ಸಾಕ್ಷ್ಯಾಧಾರಗಳು, ಲಾಡ್ಜ್ ಮಾಲಕರು, ಮೊಬೈಲ್ ಕರೆಗಳ ದಾಖಲೆ, ಚಿನ್ನಾಭರಣ ಮಾರಾಟ ಮಾಡಿದ ಅಂಗಡಿಯಾತನ ಸಾಕ್ಷ್ಯಗಳನ್ನು ದಾಖಲಿಸಿತ್ತು . ಎಎಸ್ಪಿ ಚಂದ್ರಗುಪ್ತ ತನಿಖೆ ನಡೆಸಿದ ನಂತರ ಸಿಒಡಿ ಡಿವೈಎಸ್ಪಿ ಎಂ.ಎಸ್.ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿ ಮೋಹನ್ ಕುಮಾರ್ ವಿರುದ್ಧ ಸೆಕ್ಷನ್ 302ರಲ್ಲಿ ಕೊಲೆ, 366ರಲ್ಲಿ ಪುಸಲಾವಣೆ, 376 ಅತ್ಯಾಚಾರ, 417 ವಿವಾಹ ವಂಚನೆ, 328 ವಿಷ ಪದಾರ್ಥ ನೀಡಿಕೆ, 201 ಸಾಕ್ಷ್ಯ ನಾಶ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಿತ್ತು. ಶುಕ್ರವಾರ ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ.ಜೆ.ಪುಟ್ಟರಂಗ ಸ್ವಾಮಿ ಅವರು ಅಪರಾಧಕ್ಕೆ ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸುವುದಾಗಿ ಹೇಳಿದರು. ಪಬ್ಲಿಕ್ ಪ್ರಾಸಿಕ್ಯೂಷನ್ ಪರವಾಗಿ ಜುಡಿತ್ ಕ್ರಾಸ್ತಾ ವಾದಿಸಿದ್ದರು.
ಇನ್ನೂ 15 ಪ್ರಕರಣಗಳ ವಿಚಾರಣೆ ಬಾಕಿ
ಒಟ್ಟು 20 ಮಂದಿ ಯುವತಿಯರನ್ನು ಮೋಹನ್ ಕುಮಾರ್ ಅತ್ಯಾಚಾರ ನಡೆಸಿ, ಸಯನೈಡ್ ನೀಡಿ ಕೊಲೆ ನಡೆಸಿದ್ದ. ಇದರಲ್ಲಿ ನಾಲ್ಕು ಪ್ರಕರಣಗಳಲ್ಲಿ ಮೋಹನ್ ಅಪರಾಧಿ ಎಂಬುದು ಸಾಬೀತಾಗಿದೆ. ಈ ಪೈಕಿ ಸುನಂದ ಪ್ರಕರಣದಲ್ಲಿ ಮೋಹನ್‌ಗೆ ಮಂಗಳೂರು ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಇದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಲೀಲಾವತಿ ಪ್ರಕರಣದಲ್ಲಿ 5 ವರ್ಷ ಸಜೆ, ಅನಿತಾ ಬರಿಮಾರ್ ಹಾಗೂ ವಿನುತಾ ಕೇಸಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆಯ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ನಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಮಧ್ಯೆ ತೀರ್ಪನ್ನು ಮರು ವಿಮರ್ಶಿಸುವಂತೆ ಮೋಹನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಇದು ವಿಚಾರಣೆಯಲ್ಲಿದೆ. ಉಳಿದ 15 ಪ್ರಕರಣಗಳ ವಿಚಾರಣೆಗೆ ಬಾಕಿ ಇದೆ.
2009 ಅ. 21ರಂದು ಸಯನೈಡ್‌ನಿಂದ ಕೊಲೆಯಾದ ವನಿತಾ ಪ್ರಕರಣದಲ್ಲಿ ಮೋಹನ್ ಕುಮಾರ್ ವಿರುದ್ಧ ಕೇಸು ದಾಖಲಾಗಿತ್ತು. ಪುತ್ತೂರು ಎಎಸ್ಪಿ ಚಂದ್ರಗುಪ್ತ ಅವರು ಮೋಹನ್ ಕುಮಾರ್‌ನನ್ನು 2009 ಡಿ.29ರಂದು ಬಂಧಿಸಿದ್ದರು. ಆಗ ಮೋಹನ್ ಕುಮಾರ್, ಯಶೋಧ ಕೊಲೆ ಪ್ರಕರಣವನ್ನು ಬಾಯಿಬಿಟ್ಟಿದ್ದ. ಈ ಬಳಿಕ ಯಶೋಧ ಪೋಷಕರು ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದರು.







