ನಮ್ಮದು ಸುಭದ್ರ-ಜನಪರ ಸರಕಾರವೆಂಬ ಹೆಮ್ಮೆ ಇದೆ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು, ಫೆ. 23: ದೇವರಾಜ ಅರಸು ಅವರ ಬಳಿಕ 5 ವರ್ಷ ಅವಧಿ ಪೂರ್ಣಗೊಳಿಸಿದ್ದು, ಐದು ವರ್ಷಗಳ ಕಾಲ ನಮ್ಮ ಸರಕಾರ ಸುಭದ್ರ ಹಾಗೂ ಜನಪರ ಆಡಳಿತ ನೀಡಿದೆ ಎಂಬ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಮುಖ್ಯಮಂತ್ರಿಯಾಗಿ 6ನೆ ಹಾಗೂ ಹಣಕಾಸು ಸಚಿವನಾಗಿ 13ನೆ ಬಜೆಟ್ ಮಂಡಿಸಿದ್ದೇನೆ. ರಾಮಕೃಷ್ಣ ಹೆಗ್ಡೆ ನಂತರ ನಾನೇ ಅತ್ಯಂತ ಹೆಚ್ಚು ಬಜೆಟ್ ಮಂಡಿಸಿದ್ದೇನೆ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರ ಮೇಜು ತಟ್ಟಿ ಸ್ವಾಗತಿಸಿದರು.
ಹದಿನಾಲ್ಕನೆ ವಿಧಾನಸಭೆಯ ಕೊನೆಯ ಅಧಿವೇಶನ ಇದಾಗಿದ್ದು, ನಾವು ಮತ್ತೆ ನೂತನವಾಗಿ ಆಯ್ಕೆಯಾಗುವ 15ನೆ ವಿಧಾನಸಭೆಯಲ್ಲಿ ಮುಖಾಮುಖಿ ಆಗಬೇಕಾಗುತ್ತದೆ. 5 ವರ್ಷಗಳ ಆಡಳಿತಾವಧಿಯಲ್ಲಿ ಸಾಕಷ್ಟು ಟೀಕೆ, ಸಲಹೆಗಳನ್ನು ನೀಡಿದ್ದಾರೆ. ಆಡಳಿತ ನಡೆಸಲು ಸಹಕಾರ ನೀಡಿದ ಆಡಳಿತ ಮತ್ತು ವಿಪಕ್ಷ ಸದಸ್ಯರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.
ಎಲ್ಲರೂ ಆಯ್ಕೆಯಾಗಲಿ: ಹದಿನಾಲ್ಕನೆ ವಿಧಾನಸಭೆಗೆ ಆಯ್ಕೆಯಾಗಿದ್ದ ಎಲ್ಲ ಪಕ್ಷಗಳ ಎಲ್ಲ ಶಾಸಕರು ತಮ್ಮ ಪಕ್ಷದ ಟಿಕೆಟ್ ಪಡೆದು ಹದಿನೈದನೆ ವಿಧಾನಸಭೆಗೆ ಆಯ್ಕೆಯಾಗಿ ಬರಲಿ ಎಂದು ಆಶಿಸುವೆ ಎಂದ ಅವರು, ಈಗಾಗಲೇ ರಾಜ್ಯದ ಜನತೆ ತೀರ್ಮಾನ ಮಾಡಿದ್ದು, ನಾವು ಮತ್ತೆ ಆಡಳಿತಕ್ಕೆ ಬರುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
‘ಈ ಹಿಂದೆ ಸಾಕಷ್ಟು ಮುಖ್ಯಮಂತ್ರಿಗಳು ಈ ರೀತಿ ಹೇಳಿ ಮನೆಗೆ ಹೋಗಿದ್ದಾರೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ನೀವು ಭ್ರಮೆಯಲ್ಲಿದ್ದೀರಿ’ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರ ಕಾಲೆಳೆದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ದೇಶಪಾಂಡೆ, ಚುನಾವಣೆ ಘೋಷಣೆಗೆ ಮೊದಲೇ ಈ ಬಾರಿ ಬಿಜೆಪಿ ಎಂಬ ಗೋಡೆ ಬರಹ ಕೇವಲ ಗೋಡೆ ಬರಹವಷ್ಟೇ ಎಂದು ಛೇಡಿಸಿದರು.
ಎಚ್ಚರ ವಹಿಸಬೇಕು: ವಿಧಾನ ಮಂಡಲ ಅಧಿವೇಶನದಲ್ಲಿ ನಡೆಯುವ ಚರ್ಚೆಗಳ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸದಸ್ಯರ ಹಾಜರಾತಿ ಕೊರತೆ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಬಿಜೆಪಿ ಅವಧಿಯಲ್ಲಿ 203 ದಿನ ಕಲಾಪ ನಡೆದಿದ್ದು, ನಮ್ಮ ಆಡಳಿತಾವಧಿಯಲ್ಲಿ 244 ದಿನ ಅಧಿವೇಶನ ನಡೆದಿದೆ. ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎಂಬ ನಿಯಮ ರೂಪಿಸಿದ್ದರೂ, 60 ದಿನ ಅಧಿವೇಶನ ನಡೆಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಬಜೆಟ್ ಅಲ್ಲ
‘ಚುನಾವಣಾ ಹೊಸ್ತಿಲಲ್ಲಿ ಮಂಡಿಸಿರುವ ಬಜೆಟ್‌ಗೆ ಪಾವಿತ್ರತೆ ಇಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಆದರೆ, ನನ್ನ ದೃಷ್ಟಿಯಲ್ಲಿ ಅದು ಸಲ್ಲ. ವಾಸ್ತವ ನೆಲೆಗಟ್ಟಿನಲ್ಲಿ ಬಜೆಟ್ ಮಂಡನೆ ಮಾಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಬಜೆಟ್ ಮಂಡಿಸಿಲ್ಲ. ನಿಶ್ಚಿತವಾಗಿಯೂ ನಾವೇ ಅಧಿಕಾರಕ್ಕೆ ಬರಲಿದ್ದು, ಆಯವ್ಯಯದಲ್ಲಿ ಘೋಷಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತೇವೆ, ಈ ಬಗ್ಗೆ ಸಂಶಯಬೇಡ’
-ಸಿದ್ದರಾಮಯ್ಯ ಮುಖ್ಯಮಂತ್ರಿ‘ನಾನು ಗಾಜಿನ ಮನೆಯಲ್ಲಿ ಕೂತು ಬೇರೆಯವರಿಗೆ ಕಲ್ಲು ಹೊಡೆಯುವ ಕೆಲಸ ಮಾಡುವುದಿಲ್ಲ. ಬದಲಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದು, ಜನತೆ ಮನೋಭಾವ ಅರಿತು ವಾಸ್ತವ ಸ್ಥಿತಿಯನ್ನು ಹೇಳುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ







