ಮೂಡುಬಿದಿರೆ: ಯೆನೆಪೊಯದಲ್ಲಿ ಇಂಪೆಲ್ಸಿಸ್ ತರಬೇತಿ, ಅಭಿವೃದ್ಧಿ ಕೇಂದ್ರ ಉದ್ಘಾಟನೆ

ಮೂಡುಬಿದಿರೆ, ಫೆ. 23: ನ್ಯೂಯಾರ್ಕ್ ಮೂಲದ ಇಂಪೆಲ್ಸಿಸ್ ಮಂಗಳೂರಿನ ಯೆನೆಪೊಯ ಸಂಸ್ಥೆ ತಾಂತ್ರಿಕ ಪಾಲುದಾರಿಕೆ ಬಗ್ಗೆ ಒಪ್ಪಂದ ಮಾಡಿ ಕೊಂಡಿದ್ದು ಅದರನ್ವಯ ಯೆನೆಪೊಯ ತಾಂತ್ರಿಕ ಕಾಲೇಜು ತೋಡಾರು ಕ್ಯಾಂಪಸ್‌ನಲ್ಲಿ ಇಂಪೆಲ್ಸಿಸ್ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಇಂಪೆಲ್ಸಿಸ್ ಸ್ಥಾಪಕ ಸಿಇಒ ಸಮೀರ್ ಶರೀಫ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ತಾಂತ್ರಿಕತೆಯು ಈಗ ಅಭಿವೃದ್ಧಿ ಹೊಂದುತ್ತಿದ್ದು ಇಂಪೆಲ್ಸಿಸ್ ಜಗತ್ತಿನಾ ದ್ಯಂತ ಶೈಕ್ಷಣಿಕ ಸವಾಲುಗಳಿಗೆ ಡಿಜಿಟಲ್ ತಾಂತ್ರಿಕತೆಯೊಂದಿಗೆ ಪರಿಹಾರ ನೀಡುವ ಸಂಸ್ಥೆಯಾಗಿದೆ. ಇಂಪೆಲ್ಸಿಸ್ ಇಂಟರ್ನ್‌ಶಿಪ್ ಪ್ರೋಗ್ರಾಮ್‌ನ ಮೊದಲ ಹೆಜ್ಜೆಯಾಗಿ ಕಾಲೇಜಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಂಜಿನಿಯರಿಂಗ್ ಮೂರು ಮತ್ತು ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಈ ತರಬೇತಿ ಕೇಂದ್ರ ಉಪಯುಕ್ತವಾಗಲಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿಯೊಂದಿಗೆ ಪ್ರಾಯೋಗಿಕ ಕಲಿಕೆಗೆ ಇದು ಸಹಕಾರಿ ಯಾಗಲಿದೆ ಎಂದರು.
ನಿರ್ದೇಶಕ ಫರ್ಹಾಝ್ ವೈ.ಐ.ಟಿ ಯಲ್ಲಿ ಪ್ರಾಯೋಗಿಕ ಶಿಕ್ಷಣದ ಬಗ್ಗೆ ಮಾತನಾತ್ತ ವಿದ್ಯಾರ್ಥಿಗಳು ಕೆಲಸದತ್ತ ಸಾಗಿದಾಗ ಉದ್ಯಮ ಕ್ಷೇತ್ರದಲ್ಲಿ ಏನು ಮಾಡಬೇಕು? ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಇಂಪೆಲ್ಸಿಸ್ ವಿದ್ಯಾರ್ಥಿಯನ್ನು ತರಬೇತಿ ಸಹಿತವಾಗಿ ಪರಿಪೂರ್ಣ ಉದ್ಯೋಗಿಯನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಯೆನೆಪೊಯ ಚಾನ್ಸಲರ್ ಅಬ್ದುಲ್ಲಾ ಕುಂಞಿ ಮಾತನಾಡುತ್ತಾ ಪರಿಣಾಮಕಾರಿ ತರಬೇತಿಯನ್ನು ಪಡೆಯುವಲ್ಲಿ ಇಂಪೆಲ್ಸಿಸ್ ಮೈಲುಗಲ್ಲಾಗಿದ್ದು ನೈಜ ಜಗತ್ತನ್ನು ಅರಿಯುವಲ್ಲಿ ಇದು ಸಹಕಾರಿಯಾಗಿದೆ. ಪ್ರಸಕ್ತ ವಿದ್ಯಮಾನದಲ್ಲಿ ಪ್ರಾಯೋಗಿಕ ಕಲಿಕೆ ಮುಖ್ಯವಾಗಿದ್ದು ಸ್ಪರ್ಧಾತ್ಮಕ ಜಗತ್ತನ್ನು ವಿದ್ಯಾರ್ಥಿಗಳು ಎದುರಿಸುವಲ್ಲಿ ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಐ.ಎ.ಇ ಅಧ್ಯಕ್ಷ ಮುಹಮ್ಮದ್ ಕುಂಞಿ, ಆಡಳಿತ ನಿರ್ದೇಶಕ ಪಿ.ಕೆ ಹಶೀಮ್, ಸೌದಿ ಆರಮ್ಕೋ ಮೆಡಿಕಲ್ ಸರ್ವೀಸಸ್ ನಿವೃತ್ತ ಮುಖ್ಯಸ್ಥ ಎಂ.ಎ ಶರೀಫ್, ಯೆನೆಪೊಯ ಅಬ್ದುಲ್ಲಾ ಜವೀದ್, ಯೆನೆಪೊಯ ಮೊಯ್ದಿನ್ ಖುರ್ಶಿದ್, ಐ.ಎ.ಇ ಕಾರ್ಯದರ್ಶಿ ಅಕ್ತರ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಪ್ರದೀಪ್ ಪೈ.ಜಿ ಇಂಪೆಲ್ಸಿಸ್ ಉದ್ಯಮಾನುಭವವನ್ನು ಹಂಚಿಕೊಂಡರು. ಪ್ರಾಂಶುಪಾಲ ಡಾ.ಆರ್.ಜಿ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕ ಕೆವಿನ್ ನಿರೂಪಿಸಿದರು. ಉಪನ್ಯಾಸಕ ಜೀವನ್ ಪಿಂಟೊ ವಂದಿಸಿದರು.







