ಸಂಘಪರಿವಾರದ ನಿಷೇಧಕ್ಕೆ ನರಮೇಧ, ಹಿಂಸೆಗಳೇ ಸಾಕ್ಷ್ಯಧಾರ: ಜಿ.ರಾಜಶೇಖರ್

ಉಡುಪಿ, ಫೆ. 23: ಹಿಂದುತ್ವ ಸಂಘಟನೆಯ ಭಯೋತ್ಪಾದನೆಗೆ ಸಾಕ್ಷ್ಯಧಾರವೇ ಬೇಕಾಗಿಲ್ಲ. ಅದು ಈ ದೇಶದಲ್ಲಿ ನಡೆಸಿರುವ ನರಮೇಧ, ಹಿಂಸೆಯೇ ಅದಕ್ಕೆ ಸಾಕ್ಷ್ಯಧಾರ. ಬಾಬರಿ ಮಸೀದಿ ಧ್ವಂಸ, ಮುಂಬೈ ಗಲಭೆ, ಕಂದಮಾಲ್ ಹಿಂಸೆ, ಮುಝಪರ್‌ನಗರದ ಹಿಂಸೆಯನ್ನು ಎಸಗಿರುವ ವಿಎಚ್‌ಪಿ, ಬಜರಂಗ ದಳ ಹಾಗೂ ಆರೆಸೆಸ್ಸ್‌ನ್ನು ತಕ್ಷಣವೇ ನಿಷೇಧಿಸಬೇಕು ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಆಗ್ರಹಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಯನ್ನು ನಿಷೇಧಿಸಿರುವ ಅಲ್ಲಿನ ಸರಕಾರದ ಕ್ರಮವನ್ನು ಖಂಡಿಸಿ ಪಿಎಫ್‌ಐ ಉಡುಪಿ ಜಿಲ್ಲಾ ಘಟಕ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳ ಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪಿಎಫ್‌ಐ ಇಸ್ಲಾಮಿಕ್ ಉಗ್ರ ಸಂಘಟನೆ ಎಂಬುದು ಅದನ್ನು ನಿಷೇಧಿಸಲು ಜಾರ್ಖಂಡ್ ಸರಕಾರ ನೀಡಿರುವ ಕಾರಣ. ಪಿಎಫ್‌ಐ ಉಗ್ರ ಸಂಘಟನೆಯಾ ಗಿದ್ದರೆ ಸರಕಾರದ ಬಳಿ ಇರುವ ಸಾಕ್ಷ್ಯಧಾರವನ್ನು ಜನರ ಮುಂದೆ ಇಡಬೇಕು. ಹಿಂಸೆ ಎಸಗಿರುವುದೇ ಪಿಎಫ್‌ಐ ನಿಷೇಧಕ್ಕೆ ಸಾಕ್ಷ್ಯಧಾರವಾದರೆ ಈ ದೇಶದಲ್ಲಿ ಹಿಂಸೆ ಎಸಗದ ಯಾವ ರಾಜಕೀಯ ಪಕ್ಷ ಹಾಗೂ ಸಂಘಟನೆ ಇದೆ ಎಂಬುದನ್ನು ಜಾರ್ಖಂಡ್ ಸರಕಾರ ಸ್ಪಷ್ಟಪಡಿಸಬೇಕು ಎಂದರು.
ಇಂದು ನಮ್ಮ ವ್ಯವಸ್ಥೆ ನ್ಯಾಯ ಬದ್ಧತೆಯನ್ನು ಕಳೆದುಕೊಂಡಿದೆ. ನ್ಯಾಯ ಸಮ್ಮತವಲ್ಲದ ಜಾರ್ಖಂಡ್ ರಾಜ್ಯ ಸರಕಾರ ಪಿಎಫ್‌ಐಯನ್ನು ನಿಷೇಧಿಸಿದರೆ ಆ ಆಜ್ಞೆ ನ್ಯಾಯವೂ ಅಲ್ಲ ಕಾನೂನು ಸಮ್ಮತವೂ ಅಲ್ಲ ಎಂದು ಅವರು ಹೇಳಿದರು. ಈ ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇಲ್ಲ. ಇತಹ ವ್ಯವಸ್ಥೆ ಪಿಎಫ್‌ಐ ನಿಷೇಧಕ್ಕೆ ಒಳಪಡಿಸಿದರೆ ನಾವು ಆ ಆಜ್ಞೆಯ ನ್ಯಾಯ ಪರತೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.
ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಫಿ ಬೆಳ್ಳಾರೆ ಮಾತನಾಡಿದರು. ಈ ಸಂದರ್ಭದಲ್ಲಿ ದಸಂಸ ಹೋರಾಟಗಾರ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಟಿ.ಎಸ್.ಬುಡಾನ್ ಬಾಷಾ, ಜಮಾಅತೆ ಇಸ್ಲಾಮೀ ಹಿಂದ್‌ನ ಹುಸೇನ್ ಕೋಡಿಬೆಂಗ್ರೆ, ಉಡುಪಿ ಜಾಮೀಯ ಮಸೀದಿ ಇಮಾಮ್ ರಶೀದ್ ನದ್ವಿ, ಜಮೀಯ್ಯತುಲ್ ಫಲಾಹ್ ಉಡುಪಿ ಅಧ್ಯಕ್ಷ ಖತೀಬ್ ರಶೀದ್, ಸಲಫಿ ಮುಖಂಡ ಶಾಹಿದ್ ಅಲಿ, ಮರ್ಕಝು ಜಮಾ ಅತ್ ಅಹ್ಲೆ ಹದೀಸ್‌ನ ಸಲಾಹುದ್ದೀನ್, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಅಬ್ದುರ್ರಹ್ಮಾನ್ ಮಲ್ಪೆ, ಪಿಎಫ್‌ಐ ಜಿಲ್ಲಾಧ್ಯಕ್ಷ ನಿಸಾರ್ ಅಹಮದ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.







