ಕಾರ್ಯಕರ್ತರ ನಡುವೆ ಘರ್ಷಣೆ: ಕಾಂಗ್ರೆಸ್ ಕಾರ್ಯಕರ್ತನ ಕೈ ಕಟ್

ಚಿಕ್ಕಬಳ್ಳಾಪುರ,ಫೆ.23: ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿ ಪುರ ಪಂಚಾಯತ್ ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎಸ್.ರವಿಕುಮಾರ್ ರ ಎಡಗೈಯನ್ನು ಜೆಡಿಎಸ್ ಕಾರ್ಯಕರ್ತ ಲೋಕೇಶ್ ಮಚ್ಚಿನಿಂದ ಕತ್ತರಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಘಟನೆಯ ವಿವರ: ಆರ್ಕುಂದ ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀನಿವಾಸರೆಡ್ಡಿ, ದೇವರಾಜ್, ಎಸ್.ರವಿಕುಮಾರ್, ನಾರಾಯಣಸ್ವಾಮಿ, ಸೇರಿದಂತೆ ಇನ್ನಿತರರು ಗ್ರಾಮದಲ್ಲಿ ಸಂಕ್ರಾಂತಿ ಸುಗ್ಗಿಯ ಅಂಗವಾಗಿ ಮನೆಮನೆಗೆ ಸೀರೆ ಹಂಚಿಕೊಂಡು ವಾಪಾಸಾಗಿ ಮನೆಯ ಮುಂದೆ ಕುಳಿತಿದ್ದರು. ಈ ವೇಳೆ ಏಕಾಏಕಿ ರವಿಕುಮಾರ್ ಮನೆ ಮುಂಭಾಗದಲ್ಲಿದ್ದ ಅಂಗಡಿಯಿಂದ ಬಂದ ರಮೇಶ, ಗೋವರ್ಧನ, ಲೋಕೇಶ್, ನರಸಿಂಹಮೂರ್ತಿ, ಕಾಂಗ್ರೆಸ್ ಕಾರ್ಯಕರ್ತರ ಕತ್ತಿಯಿಂದ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಲೋಕೇಶ್ ಮಚ್ಚನ್ನು ರವಿಕುಮಾರ್ ನೇರಕ್ಕೆ ಬೀಸಿದ್ದು, ಈ ವೇಳೆ ರವಿಕುಮಾರ್ ಕೈ ಅಡ್ಡ ಇಟ್ಟಿದ್ದಾರೆ. ಆದರೆ ಮಚ್ಚು ಬೀಸಿದ ರಭಸಕ್ಕೆ ರವಿಕುಮಾರ್ ಕೈ ತಂಡಾಗಿ ಬಿದ್ದಿದೆ. ಕೂಡಲೇ ಹಲ್ಲೆ ಮಾಡಿದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ರವಿಕುಮಾರ್ ನನ್ನು ಕೂಡಲೇ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದ್ದು, ಗ್ರಾಮದಲ್ಲಿ ಪ್ರಕ್ಷುಭ್ದ ವಾತಾವರಣ ನಿರ್ಮಾಣವಾಗಿದೆ.





