ನ್ಯಾಯಾಂಗ ತನಿಖೆಗೆ ವೈನ್ ಮರ್ಚಂಟ್ಸ್ ಒಕ್ಕೂಟ ಒತ್ತಾಯ
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ
ಉಡುಪಿ, ಫೆ.23: ರಾಜ್ಯ ಅಬಕಾರಿ ಇಲಾಖೆಯಲ್ಲಿರುವ ವ್ಯಾಪಕ ಭ್ರಷ್ಟಾಚಾರ, ಅಬಕಾರಿ ಅಧಿಕಾರಿಗಳ ಲಂಚ-ಮಾಮೂಲಿ ಕುರಿತು ರಾಜ್ಯದ ಫೆರಡೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ನೀಡಿರುವ ದೂರಿನ ಕುರಿತು ಸರಕಾರ 10 ದಿನಗಳ ಒಳಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಆದೇಶ ಹೊರಡಿಸಬೇಕು. ಇಲ್ಲವಾದರೆ ನ್ಯಾಯಾಲಯದಲ್ಲಿ ರಿಟ್ ದಾಖಲಿಸುವುದಲ್ಲದೇ, ಎಸಿಬಿಗೆ ದೂರು ಸಲ್ಲಿಸುವುದಾಗಿ ಫೆಡರೇಷನ್ ಎಚ್ಚರಿಕೆ ನೀಡಿದೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಅಸೋಸಿಯೇಷನ್ ಈಗಾಗಲೇ ಕಡುಭ್ರಷ್ಟ, ಅತಿಭ್ರಷ್ಟ ಹಾಗೂ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ವಿಭಾಗೀಯ ಮಟ್ಟದಲ್ಲಿ ತಯಾರಿಸಿದ್ದೇವೆ. ಅಲ್ಲದೇ ಒಕ್ಕೂಟದ ಪದಾಧಿಕಾರಿಗಳ ವಿರುದ್ಧ ಉಡುಪಿಯಲ್ಲಿ ತೊಂದರೆ ನೀಡುತ್ತಿರುವ ಅಧಿಕಾರಿಗಳ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯ ಉಪ ಆಯುಕ್ತ ಮೆರುನಂದನ್, ಉಪನಿರೀಕ್ಷಕ ಚಂದ್ರಶೇಖರ್ ನಾಯಕ್ ಹಾಗೂ ಉಪಅಧೀಕ್ಷಕ ವಿನೋದ್ ಕುಮಾರ್ ಅವರು ಜಿಲ್ಲೆಯ ಮದ್ಯ ಮಾರಾಟಗಾರರು ಹಾಗೂ ಸನ್ನದುದಾರರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತಿದ್ದಾರೆ ಎಂದು ಫೆಡರೇಷನ್ ಅಧ್ಯಕ್ಷ ಎಸ್. ಗುರುಸ್ವಾಮಿ ಮೈಸೂರು ಆರೋಪಿಸಿದರು.
ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೆಂಬಲ ನೀಡದ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರ ವಿರುದ್ಧ ಚಂದ್ರಶೇಖರ ನಾಯಕ್ ಅವರು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲು ಪ್ರಯತ್ನಿಸುತಿದ್ದಾರೆ. ಇದಕ್ಕೆ ಸಿ.ಎಲ್.7ಡಿ ಪ್ರಕರಣದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳು ನ್ಯಾಯಾಲಯದಲ್ಲಿ ಅರ್ಜಿದಾರರಾಗಿರುವುದೇ ಕಾರಣವಾಗಿದೆ ಎಂದು ಗುರುಸ್ವಾಮಿ ಹೇಳಿದರು.
ಈ ಬಗ್ಗೆ ಶೀಘ್ರವೇ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಕೋಶಾಧಿಕಾರಿ ಟಿ.ಎಂ. ಮೆಹರ್‌ವಾಡೆ ಹುಬ್ಬಳ್ಳಿ ಹೇಳಿದರು. ಸಂಘ ನೀಡಿದ ದೂರಿನಿಂದ ಅಬಕಾರಿ ಇಲಾಖೆಯ ಭ್ರಷ್ಟ ಅಧಿಕಾರಿಗಳು ಸಮಸ್ಯೆ ಎದುರಿಸುತಿದ್ದಾರೆ. ಈ ಅಧಿಕಾರಿಗಳು ಅಬಕಾರಿ ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಂಡು ಸನ್ನದುದಾರರಿಂದ ಲಂಚ ಪಡೆಯುವ ಮೂಲಕ ಮಾಡಿರುವ ಅಕ್ರಮ ಆಸ್ತಿ ಹಾಗೂ ಬೇನಾಮಿ ಪರ್ಮಿಟ್ ಬಗ್ಗೆ ಸಹ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಆಗ್ರಹಿಸಿದ್ದೇವೆ ಎಂದವರು ನುಡಿದರು.
ಒಕ್ಕೂಟದ ಪದಾಧಿಕಾರಿಗಳು, ಸನ್ನದುದಾರರಿಗೆ ವಿನಾ ಕಾರಣ ತೊಂದರೆ ಕೊಟ್ಟಲ್ಲಿ ಒಕ್ಕೂಟ ಇನ್ನು ಸಹಿಸಿಕೊಂಡು ಸುಮ್ಮನಿರಲು ಸಾದ್ಯವಿಲ್ಲ. ಇದರ ವಿರುದ್ಧ ತೀವ್ರವಾದ ಹೋರಾಟವನ್ನು ಸಂಘಟಿಸಲು ಹಿಂಜರಿಯುವುದಿಲ್ಲ ಎಂದು ಗುರುಸ್ವಾಮಿ ಹಾಗೂ ಮೆಹರ್‌ವಾಡೆ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ, ಗುಲ್ಬರ್ಗ ಮತ್ತು ಹೊಸಪೇಟೆ ವಿಭಾಗದ ಜಿ.ರಾಮುಲು, ಬೆಳಗಾವಿ ವಿಭಾಗದ ರಮೇಶ ಶಾಲಗಾರ, ಬೆಂಗಳೂರು ನಗರ ಅಧ್ಯಕ್ಷ ಲೋಕೇಶನ್ ಅಲ್ಲದೇ 26 ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.







