ಮಣಿಪಾಲ: ಗ್ರಾಮ ಸ್ವರಾಜ್ ಚಿಂತನ- ಮಂಥನ ಉದ್ಘಾಟನೆ

ಮಣಿಪಾಲ, ಫೆ.23: ಉಡುಪಿ ಜಿಲ್ಲಾಡಳಿತ, ಜಿಪಂ, ಉಡುಪಿ, ಕಾರ್ಕಳ, ಕುಂದಾಪುರ ತಾಪಂ, ಕುಂದಾಪುರ ತಾಲೂಕು ಪಂಚಾಯತ್‌ರಾಜ್ ಒಕ್ಕೂಟ ಹಾಗೂ ಕರ್ನಾಟಕ ಗ್ರಾಪಂ ಹಕ್ಕೊತ್ತಾಯ ಆಂದೋಲನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ 73ನೇ ಸಂವಿಧಾನ ತಿದ್ದುಪಡಿಯ 25 ವರ್ಷಾಚರಣೆ ಗ್ರಾಮ ಸ್ವರಾಜ್ ಚಿಂತನ ಮಂಥನ ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು.
ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ರಾಮಕೃಷ್ಣ ಹೆಗಡೆ ರಾಜ್ಯದಲ್ಲಿ ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ. ಆಗಿನ ಪ್ರಧಾನಿ ರಾಜೀವ್ ಗಾಂಧಿ ಈ ವ್ಯವಸ್ಥೆಯ ಇಡೀ ದೇಶದಲ್ಲಿ ಜಾರಿಗೊಳಿಸಲು ನಿರ್ಧರಿಸಿ ಸಂವಿಧಾನ ತಿದ್ದುಪಡಿಗೆ ನಿರ್ಧರಿಸಿದ್ದರು. ಆದರೆ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಆ ಬಗ್ಗೆ ತಿದ್ದುಪಡಿ ಮಾಡಲಾಯಿತು. ಇಂದು ಗ್ರಾಪಂ ಗಳಿಗೆ ಬರುವ ಅನುದಾನವನ್ನು ಬಳಸಿಕೊಳ್ಳುವ ಹೆಚ್ಚಿನ ಅಧಿಕಾರವನ್ನು ನೀಡ ಬೇಕು ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಗ್ರಾಮ ಸ್ವರಾಜ್ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪಂಚಾಯತ್‌ರಾಜ್ ಸಮಸ್ಯೆಯ ಬಗ್ಗೆ ಚರ್ಚಿಸಬೇಕು. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ದಾಖಲೀಕರಣ ಮಾಡಿ ಸರಕಾರಕ್ಕೆ ಕಳುಹಿಸುವ ವೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿ ಸದಸ್ಯೆ ನಂದನ ರೆಡ್ಡಿ ಮಾತನಾಡಿ, ಗ್ರಾಪಂ ಸ್ವಾಯತ್ತ ಸರಕಾರವಾಗಿದ್ದು, ಅದಕ್ಕೆ ಅಧಿಕಾರ ವನ್ನು ನೀಡದಿದ್ದರೆ ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ತೊಡಕು ಆಗುತ್ತದೆ. ಜನರಿಂದ ಮಾತ್ರ ಈ ವ್ಯವಸ್ಥೆಯನ್ನು ಸರಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರದ ಸಂಯೋಜಕ ಕೃಷ್ಣ ಕೊತ್ತಾಯ, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಒಕ್ಕೂಟದ ಕುಂದಾಪುರ ತಾಲೂಕು ಗೌರವಾಧ್ಯಕ್ಷ ಜನಾರ್ದನ ಮರ ವಂತೆ, ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕರ್ನಾಟಕ ಪಂಚಾಯತ್‌ರಾಜ್ ಪರಿಷತ್ ಆಡಳಿತ ಮಂಡಳಿ ಸದಸ್ಯ ಸಾಣೂರು ನರಸಿಂಹ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.







