ಬೆಂಗಳೂರು: ಇತಿಹಾಸ ದಾಖಲಿಸುವ ಹಳೆ ನಾಣ್ಯ, ನೋಟು ಪ್ರದರ್ಶನ
.jpg)
ಬೆಂಗಳೂರು, ಫೆ.23: ದೇಶದ ಮೊದಲ ಗಂಧಾರ ಜನಪದ ಬೆಳ್ಳಿನಾಣ್ಯದಿಂದ ಪ್ರಾರಂಭಗೊಂಡು 2017ರವರೆಗಿನ ನಾಣ್ಯ, ನೋಟುಗಳನ್ನು ನಗರದ ಶಿಕ್ಷಕರ ಭವನದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಶುಕ್ರವಾರ ಹಳೇ ನಾಣ್ಯ ಸೊಸೈಟಿ ಏರ್ಪಡಿಸಿರುವ 9ನೆ ಪ್ರದರ್ಶನದ ಅಂಗವಾಗಿ ನಗರದ ಶಿಕ್ಷಕರ ಭವನದಲ್ಲಿ ಭಾರತದ ಇತಿಹಾಸವನ್ನು ಸಾಕ್ಷೀಕರಿಸುವಂತಹ ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿದಂತೆ ಹಲವು ವಿಭಿನ್ನ ಲಿಪಿಗಳನ್ನು ಒಳಗೊಂಡ ಹಳೆ ನಾಣ್ಯಗಳ ಪ್ರದರ್ಶನ ಇಂದಿನಿಂದ 3 ದಿನಗಳ ಕಾಲ ನಡೆಯಲಿದೆ.
ಪ್ರದರ್ಶನವನ್ನು ಉದ್ಘಾಟಿಸಿದ ಪ್ರೆಸ್ಟೀಜ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ರಿಜ್ವಾನ್ ರಝಾಕ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ನಾಣ್ಯಶಾಸ್ತ್ರದ ಬಗ್ಗೆ ತಿಳಿಸುವ ಶಿಕ್ಷಣವಿರಬೇಕು. ಹೀಗಾಗಿ ಶೀಘ್ರದಲ್ಲಿಯೆ ಬೆಂಗಳೂರಿನಲ್ಲಿ ಭಾರತೀಯ ನೋಟುಗಳ ಮ್ಯೂಸಿಯಮ್ ಆರಂಭಿಸುವುದಾಗಿ ತಿಳಿಸಿದರು.
ಹಿರಿಯ ನಾಣ್ಯಶಾಸ್ತ್ರ ತಜ್ಞ ಪ್ರೊ.ಎಸ್.ಕೆ. ಭಟ್ ಮಾತನಾಡಿ, ಇಂದಿನ ಮೊಬೈಲ್ ಮಾಹಿತಿ ತಂತ್ರಜ್ಞಾನದಲ್ಲಿ ಯುವಜನತೆ ನಾಣ್ಯಸಂಗ್ರಹದಂತಹ ಹವ್ಯಾಸವನ್ನೇ ಮರೆಯುತ್ತಿದ್ದಾರೆ. ಹಳೆಯ ನಾಣ್ಯದಲ್ಲಿ ನೂರಾರು ವರ್ಷಗಳ ಇತಿಹಾಸ ಅಡಗಿರುತ್ತದೆ ಎಂದು ತಿಳಿಸಿದರು.
ಕನ್ನಡ ನಾಡು ನಾಣ್ಯ ಸಂಘದ ಉಪಾಧ್ಯಕ್ಷರು ಪಿ.ಸುಬ್ರಮಣ್ಯಂ ಶೆಟ್ಟಿ ಮಾತನಾಡಿ, ಪ್ರದರ್ಶನದಲ್ಲಿ 1917ರಲ್ಲಿ ಮುದ್ರಣವಾದ ಒಂದು ರೂಪಾಯಿ ನೋಟಿನಿಂದ 2017ರ ವರೆಗಿನ ನೂರು ವರ್ಷದಲ್ಲಿ ಮುದ್ರಣವಾದ ಒಂದು ರೂಪಾಯಿ ನೋಟುಗಳಿವೆ. ಈ ನೂರು ವರ್ಷದ ಅವಧಿಯಲ್ಲಿ 60 ವಿಭಿನ್ನ ಬಗೆಯಲ್ಲಿ ಒಂದು ರೂಪಾಯಿ ನೋಟು ಮುದ್ರಣಗೊಂಡಿದೆ ಎಂದು ಮಾಹಿತಿ ನೀಡಿದರು.
ಮೊಘಲರು, ಸುಲ್ತಾನರು, ತುಘಲಕ್ ಕಾಲದ ನಾಣ್ಯಗಳು ಟಿಪ್ಪುಸುಲ್ತಾನ್ ಮಾತ್ರವೇ ಮುದ್ರಿಸಿದಂತ 2 ರೂ. ಬೆಳ್ಳಿ ನಾಣ್ಯ ಕೂಡ ಇಲ್ಲಿದೆ. ಒಂದು ಪೈಸಾದ ಬೆಲೆ ಹತ್ತು ರೂ. ಆದರೆ, ಗಂಧಾರ ಜನಪದ ನಾಣ್ಯದ ಬೆಲೆ ಸುಮಾರು 6 ಸಾವಿರವಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಇಲ್ಲಿ 2 ಸಾವಿರ ವರ್ಷದ ಹಿಂದಿನ ಜರ್ಮನ್ ತಯಾರಿಕೆಯ ವಾಚುಗಳು ಲಭ್ಯವಿವೆ. ಹಾಗೆ ಮೆಕ್ಯಾನಿಕಲ್ ಕ್ಯಾಲ್ಕುಲೇಟರ್ ಕೂಡ ನೋಡಬಹುದಾಗಿದೆ. ನಾಣ್ಯ ಮತ್ತು ನೋಟುಗಳ ಮೂಲಕ ಇತಿಹಾಸವನ್ನು ಅರಿಯಲು ಸಹಾಯವಾಗುತ್ತದೆ.







