ಭಾಸ್ಕರ್ ಶೆಟ್ಟಿ ಕೊಲೆ: ಎಸ್‌ಪಿಪಿ ನೇಮಕ ತಡೆಯಾಜ್ಞೆ ತೆರವು
ರಾಜೇಶ್ವರಿ ಆಕ್ಷೇಪಣೆಗೆ ಗುಲಾಬಿ ಶೆಡ್ತಿ ಪ್ರತಿ ಆಕ್ಷೇಪಣೆ ಸಲ್ಲಿಕೆ

ಉಡುಪಿ, ಫೆ. 23: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಶೇಷ ಅಭಿಯೋಜಕ ಶಾಂತಾರಾಮ್ ಶೆಟ್ಟಿ ನೇಮಕದ ತಡೆಯಾಜ್ಞೆ ತೆರವಿಗೆ ಸಂಬಂಧಿಸಿ ಆರೋಪಿ ರಾಜೇಶ್ವರಿ ಶೆಟ್ಟಿ ರಾಜ್ಯ ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ಆಕ್ಷೇಪಣೆಗೆ ಪ್ರತಿಯಾಗಿ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿ ತನ್ನ ಆಕ್ಷೇಪಣೆ ಯನ್ನು ಫೆ.22ರಂದು ಸಲ್ಲಿಸಿದ್ದಾರೆ.
ಹೈಕೋರ್ಟ್ ಆದೇಶದಂತೆ ಈ ಪ್ರಕರಣದ ವಿಶೇಷ ಅಭಿಯೋಜಕರ ನೇಮಕದ ವಿರುದ್ಧ ರಾಜೇಶ್ವರಿ ಶೆಟ್ಟಿ ರಾಜ್ಯ ಗೃಹ ಕಾರ್ಯದರ್ಶಿಗೆ ಆಕ್ಷೇಪಣೆ ಯನ್ನು ಸಲ್ಲಿದ್ದರು. ಈ ಸಂಬಂಧ ಪ್ರಕರಣದ ದೂರುದಾರರಾದ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿಗೆ ಇಲಾಖೆ ನೋಟೀಸ್ ಜಾರಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ರಾಜೇಶ್ವರಿ ಶೆಟ್ಟಿಯ ಆಕ್ಷೇಪಣೆಯ ವಿರುದ್ಧ ಗುಲಾಬಿ ಶೆಡ್ತಿ ಪ್ರತಿ ಆಕ್ಷೇಪಣೆಯನ್ನು ಗೃಹ ಕಾರ್ಯದರ್ಶಿಗೆ ಸಲ್ಲಿಕೆ ಮಾಡಿದ್ದಾರೆ.
ಮಾ.12ಕ್ಕೆ ಮುಂದೂಡಿಕೆ: ವಿಶೇಷ ಅಭಿಯೋಜಕರ ನೇಮಕವನ್ನು 15 ದಿನಗಳೊಳಗೆ ಸರಕಾರ ಇತ್ಯರ್ಥ ಪಡಿಸಬೇಕು ಮತ್ತು ಅಲ್ಲಿಯವರೆಗೆ ಈ ಪ್ರಕರಣದ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಬಾರದು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಫೆ. 9ರ ವಿಚಾರಣೆಯನ್ನು ನ್ಯಾಯಾಲಯವು ಫೆ.23ಕ್ಕೆ ಮುಂದೂಡಿತ್ತು. ಆದರೆ ಸರಕಾರ ವಿಶೇಷ ಅಭಿಯೋಜಕರ ನೇಮಕವನ್ನು ಈವರೆಗೆ ಇತ್ಯರ್ಥ ಪಡಿಸದ ಕಾರಣ ಆರೋಪಿ ಪರ ವಕೀಲರು ಮತ್ತೆ ಸಮಯಾವಕಾಶವನ್ನು ನ್ಯಾಯಾಲಯದಲ್ಲಿ ಇಂದು ಕೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಟಿ.ವೆಂಕಟೇಶ್ ನಾಯ್ಕಾ ಪ್ರಕರಣದ ವಿಚಾರಣೆ ನಿಗದಿಪಡಿಸುವ ದಿನವನ್ನು ಮಾ.12ಕ್ಕೆ ಮುಂದೂಡಿ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಭಾಯಿ, ಆರೋಪಿಗಳ ಪರ ವಕೀಲರಾದ ಅರುಣ್ ಬಂಗೇರ, ವಿಕ್ರಂ ಹೆಗ್ಡೆ ಹಾಜರಿದ್ದರು. ಇಂದಿನ ವಿಚಾರಣೆಯನ್ನು ಕೂಡ ಆರೋಪಿಗಳು ಇರುವ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು.







