ಅಖಿಲ ಭಾರತ ಮಹಿಳೆಯರ ನೆಟ್‌ಬಾಲ್ ಚಾಂಪಿಯನ್‌ಶಿಪ್: ಮಂಗಳೂರು ವಿವಿಗೆ ಪ್ರಶಸ್ತಿ: ಕ್ಯಾಲಿಕಟ್ ರನ್ನರ್ಸ್

ಉಡುಪಿ, ಫೆ.23: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಜಂಟಿ ಆಶ್ರಯದಲ್ಲಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ನೆಟ್‌ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇಂದು ಅಪರಾಹ್ನ ನಡೆದ ಟೂರ್ನಿಯ ರೌಂಡ್ ರಾಬಿನ್ ಲೀಗ್ ಪಂದ್ಯಗಳಲ್ಲಿ ಆತಿಥೇಯ ಮಂಗಳೂರು ವಿವಿ ತಂಡ, ಕೇರಳದ ಕ್ಯಾಲಿಕಟ್ ವಿಶ್ವ ವಿದ್ಯಾನಿಲಯವನ್ನು 56-44, ಚಂಡೀಗಡದ ಪಂಜಾಬ್ ವಿವಿಯನ್ನು 65-39 ಹಾಗೂ ದೆಹಲಿ ವಿವಿಯನ್ನು 65-41 ಅಂಕಗಳೊಂದಿಗೆ ಸೋಲಿಸಿ ಅಗ್ರಸ್ಥಾನ ಪಡೆದು ಕೂಟದ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಕ್ಯಾಲಿಕಟ್ ವಿವಿ ದ್ವಿತೀಯ, ದೆಹಲಿ ವಿವಿ ತೃತೀಯ ಹಾಗೂ ಪಂಜಾಬ್ ವಿವಿ ಚತುರ್ಥ ಸ್ಥಾನವನ್ನು ಪಡೆದುಕೊಂಡವು. ಮಂಗಳೂರು ವಿವಿ ಕಳೆದ ಬಾರಿ ನಾಲ್ಕನೇ ಸ್ಥಾನ ಪಡೆದಿತ್ತು. ಟೂರ್ನಿಯ ಬೆಸ್ಟ್ ಗೋಲ್ ಶೂಟರ್ ವೈಯಕ್ತಿಕ ಪ್ರಶಸ್ತಿಯನ್ನು ಮಂಗಳೂರು ವಿವಿಯ ಮೇಘ ಮತ್ತು ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ದೆಹಲಿ ವಿವಿಯ ನು ಶರ್ಮ ತನ್ನದಾಗಿಸಿಕೊಂಡರು.
ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠಾ ಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿ ದರು. ಮಂಗಳೂರು ವಿವಿಯ ರಿಜಿಸ್ಟ್ರಾರ್ ಪ್ರೊ.ಬಿ.ಎಸ್.ನಾಗೇಂದ್ರ ಪ್ರಕಾಶ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿಜಯ್ ಭಾರಧ್ವಾಜ್, ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ವೀಕ್ಷಕ ಡಾ.ರಾಜೇಶ್ ಮಾತನಾಡಿ ದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ರೆಫ್ರಿ ಪ್ರೇಮ ನಾಥ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕಿ ವಸಂತ ಸ್ವಾಗತಿಸಿ ದರು. ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ದಿವ್ಯಾ ಕಾರ್ಯ ಕ್ರಮ ನಿರೂಪಿಸಿದರು.







