ಬೋಗಸ್ ದಾಖಲೆ ಸೃಷ್ಟಿಸುವವರ ವಿರುದ್ಧ ಜಾಗೃತರಾಗಿರಿ: ಶಾಸಕ ಎಂ.ಪಿ.ಅಪ್ಪಚ್ಚುರಂಜನ್

ಮಡಿಕೇರಿ, ಫೆ.23 :ಪರಿಶಿಷ್ಟರ ಹೆಸರಿನಲ್ಲಿಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದರೊಂದಿಗೆ, ಸರ್ಕಾರಿ ಉದ್ಯೋಗವನ್ನು ಕೂಡ ಗಳಿಸಿಕೊಳ್ಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪರಿಶಿಷ್ಟ ಸಮಾಜಗಳು ಎಚ್ಚೆತ್ತುಕೊಳ್ಳಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.
ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿ ಸಂಘಟನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಭೋವಿ ಜನಾಂಗದ ಐಕ್ಯತಾ ಸಮಾವೇಶ ಮತ್ತು ಭೋವಿ ಸಮುದಾಯದ ಆದಿ ಗುರುಗಳಾದ ಶ್ರೀ ಸಿದ್ಧರಾಮೇಶ್ವರರ 846ನೇ ಜಯಂತ್ಯೋತ್ಸವ ನಗರದ ಕಾವೇರಿ ಹಾಲ್‍ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ದೇಶದ ನೀಡಿರುವ ಮೀಸಲಾತಿ ವ್ಯವಸ್ಥೆಯಂತೆ ಸಂಬಂಧಿಸಿದವರು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಪರಿಶಿಷ್ಟರಿಗಾಗಿ ಮೀಸಲಿಟ್ಟ ಸೌಲಭ್ಯಗಳನ್ನು ಬೋಗಸ್ ದಾಖಲೆಗಳ ಮೂಲಕ ಪಡೆಯುವುದನ್ನು ತಡೆಗಟ್ಟಬೇಕಾಗಿದೆಯೆಂದು ತಿಳಿಸಿದರು.
ಬೋಗಸ್ ದಾಖಲೆ ಸೃಷ್ಟಿಸಿ ಸರ್ಕಾರಿ ಸೌಲಭ್ಯ ಪಡೆದಿರುವವರ ಬಗ್ಗೆ ಇತ್ತೀಚೆಗೆ ತಾವು ವಿಧಾನಸಭೆಯಲ್ಲಿ ಮಾಹಿತಿ ಬಯಸಿದಾಗ, ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಉದ್ಯೋಗಿಯಾಗಿ ಎಲ್ಲಾ ಸೌಲಭ್ಯವನ್ನು ಅನುಭವಿಸಿ ನಿವೃತ್ತಿ ಹಂತಕ್ಕೆ ಬಂದು ತಲುಪಿರುವ ಬೆಳವಣಿಗೆ ಕಂಡು ಬಂದಿದೆ. ಈ ರೀತಿಯ ಅನೇಕ ಪ್ರಕರಣಗಳು ರಾಜ್ಯದಲ್ಲಿದ್ದು, ಇದಕ್ಕೆ ಅವಕಾಶ ನೀಡದಂತೆ ಪರಿಶಿಷ್ಟ ಗುಂಪಿಗೆ ಸೇರಿದ ಸಮಾಜಗಳು ಎಚ್ಚೆತ್ತುಕೊಳ್ಳಬೇಕು ಮತ್ತು ಇಂತಹ ಪ್ರಕರಣಗಳನ್ನು ಪತ್ತೆಹಚ್ಚಬೇಕೆಂದು ಸಲಹೆ ನೀಡಿದರು.
ಪ್ರತಿಯೊಂದು ಜನಾಂಗಕ್ಕೂ ತಮ್ಮದೇ ಆದ ಸಮಾಜಗಳಿರುತ್ತವೆ. ಈ ಸಮಾಜದ ಕಾರ್ಯ ವೈಖರಿ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದೆಂದರು. ಪ್ರತಿಯೊಂದು ಸಮಾಜ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟ ಅಪ್ಪಚ್ಚು ರಂಜನ್, ಭೋವಿ ಜನಾಂಗದಲ್ಲಿ ಆರ್ಥಿಕವಾಗಿ ಸಬಲರಾಗಿರುವವರು ಶಿಕ್ಷಣ ನಿಧಿಯನ್ನು ಸ್ಥಾಪಿಸುವ ಮೂಲಕ ಸಮಾಜದ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಶ್ರೀಮಂತಗೊಳಿಸಬೇಕೆಂದರು. ಸರ್ಕಾರದ ಮೂಲಕ ಸಾಕಷ್ಟು ಸೌಲಭ್ಯಗಳು ಜಾರಿಯಲ್ಲಿದ್ದು, ಇದರ ಬಗ್ಗೆ ಮಾಹಿತಿಯನ್ನು ಪಡೆದು, ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಸೌಲಭ್ಯಗಳು ಬೋಗಸ್ ವ್ಯಕ್ತಿಗಳ ಪಾಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಬಲವಾಗಿರುವುದರಿಂದ ಚಹಾ ಮಾರುತ್ತಿದ್ದ ವ್ಯಕ್ತಿ ಇಂದು ಪ್ರಧಾನಿಯಾಗಿ ದೇಶವನ್ನು ಆಳುತ್ತಿದ್ದಾರೆ. ಪ್ರಜಾಪ್ರಭುತ್ವದ ಬಲವನ್ನು ಪ್ರತಿಯೊಬ್ಬರು ಅರಿತುಕೊಂಡು ಪ್ರಗತಿಯನ್ನು ಸಾಧಿಸಬೇಕೆಂದರು.
ಬೋವಿ ಭವನದ ಬಗ್ಗೆ ಸಂಘಟನೆಯ ಪ್ರಮುಖರು ಶಾಸಕರ ಗಮನ ಸೆಳೆದಾಗ, ಕುಶಾಲನಗರ ವ್ಯಾಪ್ತಿಯಲ್ಲಿ ಪೈಸಾರಿ ಜಾಗವನ್ನು ಗುರುತಿಸಿದರೆ, ಭವನ ನಿರ್ಮಾಣಕ್ಕೆ ಸರ್ಕಾರ ನೀಡುವ 1 ಕೋಟಿ ವೆಚ್ಚದಲ್ಲಿ ಭೋವಿ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಗೊಂದಿಬಸವನಹಳ್ಳಿಯಲ್ಲಿ ಬೋವಿ ಜನಾಂಗದ ಅನೇಕರಿಗೆ ಜಾಗದ ಹಕ್ಕುಪತ್ರ ನೀಡಲಾಗಿದೆ. ಉಳಿದಿರುವ ಅರ್ಜಿದಾರರಿಗೆ ಮುಂದಿನ ದಿನಗಳಲ್ಲಿ ಹಕ್ಕುಪತ್ರ ನೀಡಲಾಗುವುದೆಂದು ಅಪ್ಪಚ್ಚು ರಂಜನ್ ತಿಳಿಸಿದರು.
ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವನೆಯನ್ನು ಮೈಗೂಡಿಸಿಕೊಂಡು ಜಾಗೃತಿ ಶಕ್ತಿಯನ್ನು ಪ್ರದರ್ಶಿಸಿದಾಗ ಮಾತ್ರ ಸರ್ಕಾರಗಳು ನಿಮ್ಮ ಕಡೆ ತಿರುಗಿ ನೋಡುತ್ತವೆ ಎಂದು ಭೋವಿ ಸಮಾಜಕ್ಕೆ ಕರೆ ನೀಡಿದರು.
ಬಡವರಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಕಾರ್ಯವನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮಾಡಿದ್ದಾರೆ. ಈ ಆದರ್ಶವನ್ನು ಪರಿಪಾಲಿಸುವ ಮೂಲಕ ಭೋವಿ ಜನಾಂಗ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಸುಮಾರು 68 ಸಾವಿರ ವಚನಗಳನ್ನು ರಚಿಸಿರುವ ಆದಿ ಗುರುಗಳಾದ ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳು ಕೃಷಿಗೆ ಆದ್ಯತೆ ನೀಡಿದ್ದರು. ವೇದಿಕೆಗಳಲ್ಲಿ ಎಷ್ಟೇ ಭಾಷಣಗಳನ್ನು ಮಾಡಿದರು ಸಮಾಜ ಇಂದು ಜಾತಿ, ಮತ, ಭೇದ ಮುಕ್ತವಾಗಿಲ್ಲ. ಮೇಲು ಕೀಳೆನ್ನುವ ಮನೋಭಾವನೆ ಇನ್ನೂ ಕೂಡ ಇದ್ದು, ಶೈಕ್ಷಣಿಕ ಸಾಧನೆ ಮೂಲಕ ಎಲ್ಲರೂ ಒಂದೇ ಎನ್ನುವುದನ್ನು ಸಾಬೀತುಪಡಿಸಬೇಕಾಗಿದೆ ಎಂದರು.
ಜ್ಞಾನ ಭಂಡಾರವನ್ನು ಸಂಪಾದಿಸುವಂತೆ ಕರೆ ನೀಡಿದ ಟಿ.ಪಿ. ರಮೇಶ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆಯೆಂದು ಶ್ಲಾಘಿಸಿದರು.
ಭೋವಿ ಸಮಾಜದ ಶ್ರೀನಿರಂಜನ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿದ ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು. ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಕಿವಿ ಮಾತು ಹೇಳಿದರು.
ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಿ.ಸುಜಿತ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿಯ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ವೈ.ಕೊಟ್ರೇಶ್ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ವಿ.ವಿ.ಭಾರತೀಶ್, ಜಿ.ಪಂ ಸದಸ್ಯರಾದ ಮುರಳಿ ಕರುಂಬಮ್ಮಯ್ಯ, ಪೂರ್ಣಿಮಗೋಪಾಲ್, ತಾ.ಪಂ ಉಪಾಧ್ಯಕ್ಷರಾದ ಸಂತುಸುಬ್ರಮಣಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಎ.ಯಾಕೂಬ್ ಮತ್ತಿತರ ಪ್ರಮುಖರು ಹಾಗೂ ಭೋವಿ ಸಮಾಜದ ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಯಿತು.
ಬೇಡಿಕೆಗಳು
ಭೋವಿ ಸಮುದಾಯ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮಂಜೂರು ಮಾಡಬೇಕು, ಕಲ್ಲು ಗಣಿಗಾರಿಕೆಯನ್ನು ಭೋವಿ ಜನಾಂಗದವರೇ ನಿರ್ವಹಿಸಲು ಅನುಮತಿ ನೀಡಬೇಕು, ಸೂಕ್ತ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮೂಲಕ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು, ಸ್ಮಶಾನಕ್ಕಾಗಿ ಜಾಗ ಮೀಸಲಿಡಬೇಕು, ಸರಕಾರಿ ಭೂಮಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ವಿಕಲಚೇತನ, ಬುದ್ದಿಮಾಂದ್ಯ ಹಾಗೂ ವಯೋವೃದ್ಧರಿಗೆ ಧನ ಸಹಾಯ ಮಾಡಬೇಕು.
ಕುಸಿಯುತ್ತಿದೆ ಜನಸಂಖ್ಯೆ
ಕೊಡಗು ಜಿಲ್ಲೆಯಲ್ಲಿ ಸರ್ಕಾರದ ನಿಯಮಗಳನ್ನು ಪ್ರಾಮಾಣಿಕವಾಗಿ ಪರಿಪಾಲನೆ ಮಾಡುತ್ತಿರುವುದರಿಂದ ಜನಸಂಖ್ಯೆ ಇಳಿಮುಖವಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಸಭೆಯಲ್ಲಿ ಅಭಿಪ್ರಾಯಪಟ್ಟರು. ಪ್ರಸ್ತುತ ನಾವಿಬ್ಬರು ನಮಗೊಬ್ಬರು ಎನ್ನುವ ಪರಿಸ್ಥಿತಿ ಇದ್ದು, ಜಿಲ್ಲೆಯ
ವಿಧಾನಸಭಾ ಕ್ಷೇತ್ರಗಳು ಕೂಡ ಮೂರರಿಂದ ಎರಡಕ್ಕೆ ಇಳಿಕೆಯಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು, ತಮ್ಮ ಕ್ಷೇತ್ರದಲ್ಲಿ 220 ಕಿ.ಮೀ.ಗಳಷ್ಟು ದೂರವನ್ನು ಕ್ರಮಿಸಬೇಕಾಗಿದ್ದು, ತಾವು 170 ಕಿ.ಮೀ. ದೂರ ಸಾಗಬೇಕಾಗಿದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು.