ಮಡಿಕೇರಿ: ವನ್ಯಜೀವಿಗಳ ಹಾವಳಿ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಮಡಿಕೇರಿ,ಫೆ.23 :ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆ ಸೇರಿದಂತೆ ವನ್ಯ ಜೀವಿಗಳ ಹಾವಳಿಯಿಂದ ಬೆಳೆ ಹಾನಿಯೊಂದಿಗೆ ಜೀವಹಾನಿ ಸಂಭವಿಸುತ್ತಿದ್ದರು, ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬೆಳೆಗಾರರು ಹಾಗೂ ಕಾರ್ಮಿಕ ಸಮೂಹ ಬೃಹತ್ ಪ್ರತಿಭಟನೆ ನಡೆಸಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ರೈತ ಸಂಘದ ಜಿಲ್ಲಾ ಘಟಕ, ಕೊಡಗು ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಸೇರಿದಂತೆ ಸಿಪಿಐಎಂ, ದಲಿತ ಸಂಘರ್ಷ ಸಮಿತಿ, ಯುಕೋ, ಕಾರ್ಮಿಕ ಸಂಘಟನೆಗಳು ಒಗ್ಗೂಡಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಅರಣ್ಯ ಭವನದ ಮುಂಭಾಗ ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿದವು.
ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ, ಹೋರಾಟ ಸಮಿತಿಯ ಅಧ್ಯಕ್ಷ ಪ್ರವೀಣ್ ಬೋಪಯ್ಯ ಅವರ ಮುಂದಾಳತ್ವದಲ್ಲಿ ಶುಕ್ರವಾರ ಬೆಳಗ್ಗೆ ನಗರದ ಗಾಂಧಿ ಮೈದಾನದಿಂದ ಅರಣ್ಯ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸುತ್ತೋಲೆಗೆ ಅಗ್ನಿ ಸ್ಪರ್ಶ
ಕಾಡಾನೆ ಸೇರಿದಂತೆ ವನ್ಯ ಜೀವಿಗಳ ಹಾವಳಿಯಿಂದ ಉಂಟಾಗುತ್ತಿರುವ ಕೃಷಿ ಹಾನಿ, ಜೀವಹಾನಿಗೆ ಸಂಬಂಧಿಸಿದಂತೆ ನೀಡಬೇಕಾಗಿರುವ ಪರಿಹಾರದ ಕುರಿತ ಅರಣ್ಯ ಇಲಾಖೆಯ ಸುತ್ತೋಲೆ ಅವೈಜ್ಞಾನಿಕವೆಂದು ಆರೋಪಿಸಿದ ಪ್ರತಿಭಟನಾಕಾರರು, ಸುತ್ತೋಲೆಯ ಪ್ರತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಗೆಡಹಿದರು.
ಈ ಸಂದರ್ಭ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ವನ್ಯ ಜೀವಿಗಳ ಹಾವಳಿಯಿಂದ ವ್ಯಕ್ತಿಯೊಬ್ಬಾತ ಸಾವನ್ನಪ್ಪಿದಲ್ಲಿ ನೀಡುತ್ತಿರುವ 5 ಲಕ್ಷ ಪರಿಹಾರ ಧನವನ್ನು 30 ಲಕ್ಷಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಪ್ರಸ್ತುತ ಬೆಳೆಗಾರ ಸಮೂಹ ಆನೆ ಹಾವಳಿಯಿಂದ ತೀವ್ರ ಸಂಕಷ್ಟವನ್ನೆದುರಿಸುತ್ತಿದೆ. ಇದಕ್ಕೆ ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಬಳಿಗೆ ಬಂದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರನ್ನು ರೈತ ಸಂಘಟನೆಯ ಪ್ರಮುಖರು ತೀವ್ರ ತರಾಟೆಗೆ ಒಳಪಡಿಸಿ, ವನ್ಯ ಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳದಿರುವ ಕ್ರಮವನ್ನು ಖಂಡಿಸಿದ್ದಲ್ಲದೆ, ಪರಿಹಾರದ ಸುತ್ತೋಲೆಯನ್ನು ಬದಲಿಸಬೇಕೆಂದು ಒತ್ತಾಯಿಸಿದರು.
ಸಿಸಿಎಫ್ ಲಿಂಗರಾಜು ಪ್ರತಿಕ್ರಿಯಿಸಿ, ಆನೆ ಹಾವಳಿ ತಡೆಗೆ ಸಿದ್ದಾಪುರ , ವೀರಾಜಪೇಟೆ ವಿಭಾಗದಲ್ಲಿ ಮೂವತ್ತು ಕ್ಯಾಂಪ್‍ಗಳನ್ನು ಮಾಡಲಾಗಿದ್ದು, ಆನೆ ಹಾವಳಿಯ ಸಂದರ್ಭ ಸ್ಪಂದಿಸಲಾಗುತ್ತಿದೆ. 10 ಕಿ.ಮೀ. ರೈಲ್ವೆ ಹಳಿಗಳ ಬೇಲಿ ನಿರ್ಮಾಣಕ್ಕೆ ಈಗಾಗಲೆ ಟೆಂಡರ್ ನಡೆಸಿದೆ, ಶ್ರೀಲಂಕಾ ಮಾದರಿಯ ಸೋಲಾರ್ ಬೇಲಿ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಜಿಲ್ಲೆಯ 100 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ಅಗತ್ಯವಾದ ಆಹಾರ ಒದಗಿಸುವ ಪ್ಲಾಂಟೇಷನ್ ಮಾಡಲಾಗುವುದೆಂದು ತಿಳಿಸಿದರು.
ಮೂರು ತಾಲ್ಲೂಕುಗಳಲ್ಲಿ ಸಭೆ- ಶೀಘ್ರವೇ ಬೆಳೆಗಾರರ ಸಮಸ್ಯೆಗಳನ್ನು ಆಲಿಸಲು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಭೆ ನಡೆಸುವುದಾಗಿ ತಿಳಿಸಿದ ಸಿಸಿಎಫ್, ಇದೇ ಫೆ. 26 ರಂದು ಬೆಂಗಳೂರಿನಲ್ಲಿ ನಡೆಯುವ ಇಲಾಖಾ ಉನ್ನತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಬೆಳೆಗಾರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಸುಜಯ್ ಬೋಪಣ್ಣ, ಕಾನೂನು ಸಲಹೆಗಾರ ಹೇಮಚಂದ್ರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ, ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್, ಪಿ.ಆರ್. ಭರತ್, ಮಹದೇವ್, ಅಮ್ಮತ್ತಿ ಬೆಳೆಗಾರರ ಸಂಘದ ಕುಶಾಲಪ್ಪ, ಬೆಳೆಗಾರ ಪ್ರಮುಖರಾದ ನಂದಾ ಗಣಪತಿ, ಸುಭಾಷ್, ಕಾರ್ಮಿಕ ಸಂಘಟನೆಯ ಪ್ರಮುಖರಾದ ಎನ್.ಡಿ. ಕುಟ್ಟಪ್ಪ, ದಸಂಸ ಜಿಲ್ಲಾ ಸಂಚಾಲಕ ಪರಶುರಾಮ್, ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ಅರಣ್ಯ ಭವನಕ್ಕೆ ‘ಸರ್ಪಗಾವಲು’..!?
ರೈತ ಸಂಘದ ನೇತೃತ್ವದಲ್ಲಿ ಬೆಳೆಗಾರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಾರೆನ್ನುವ ಕಾರಣದಿಂದ ಅರಣ್ಯ ಭವನದ ಮುಂಭಾಗ ಪೊಲೀಸ್ ಸರ್ಪಗಾವಲು ಹಾಕಿದ್ದು, ಪ್ರತಿಭಟನಾ ನಿರತ ಬೆಳೆಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಭಟನಾ ಮೆರವಣಿಗೆ ಬರುತ್ತಿರುವಂತೆಯೇ ಅರಣ್ಯ ಭವನದ ಮುಂಭಾಗ ಮತ್ತು ಪ್ರತಿಭಟನಾ ಮೆರವಣಿಗೆಯೊಂದಿಗೆ 150ಕ್ಕೂ ಹೆಚ್ಚಿನ ಪೊಲೀಸರನ್ನು ನೇಮಿಸಲಾಗಿತ್ತಾದರೆ, ಅರಣ್ಯ ಭವನದ ಮುಂಭಾಗ ಬ್ಯಾರಿಕೇಡ್ ಸೇರಿದಂತೆ, ಮರದ ಕಂಬಗಳನ್ನು ಅಳವಡಿಸಿ ಯಾವೊಬ್ಬ ವ್ಯಕ್ತಿಯೂ ಅರಣ್ಯ ಭವನದ ಆವರಣ ಪ್ರವೇಶಿಸದಂತೆ ತಡೆಯೊಡ್ಡಲಾಗಿತ್ತು. ಬಳಿಕ ರೈತ ಸಂಘದ ಮನವಿಯ ಮೇರೆ ಪ್ರತಿಭಟನಾಕಾರರನ್ನು ಒಳಗೆ ಬಿಡಲಾಯಿತು.
ಮುಖ್ಯಮಂತ್ರಿಗಳು ಕೊಡಗನ್ನು ಅನಾಥವನ್ನಾಗಿಸಿದ್ದಾರೆ
ಕಳೆದ ನಾಲ್ಕೂವರೆ ವರ್ಷಗಳ ರಾಜ್ಯಸರ್ಕಾರದ ಆಡಳಿತದ ಅವಧಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ 38 ಜೀವಹಾನಿ ಪ್ರಕರಣಗಳು ನಡೆದಿದ್ದರು, ಸೂಕ್ತ ಕ್ರಮ ಕೈಗೊಳ್ಳದ ಮುಖ್ಯ ಮಂತ್ರಿಗಳು ಕೊಡಗನ್ನು ಅನಾಥವನ್ನಾಗಿ ಮಾಡಿರುವುದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.
ಜಿಲ್ಲೆಯ ವನ್ಯಜೀವಿಗಳ ಹಾವಳಿಯ ಬಗ್ಗೆ ಅರಣ್ಯ ಸಚಿವರಿಗೆ ಮನವಿ ಮಾಡಿಕೊಂಡಿದ್ದರು, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ರಮಾನಾಥ್ ರೈ ಓರ್ವ ನಿಷ್ಕ್ರೀಯ ಸಚಿವರೆಂದು ಟೀಕಿಸಿ, ದಕ್ಷಿಣ ಕನ್ನಡ ಮತ್ತು ವರುಣ ಕ್ಷೇತ್ರದಲ್ಲಿ ಕೊಡಗಿನ ಪರಿಸ್ಥಿತಿ ಇದ್ದಿದ್ದರೆ ಅರಣ್ಯ ಸಚಿವರು ಮತ್ತು ಮುಖ್ಯ ಮಂತ್ರಿಗಳು ಮೌನವಾಗಿರುತ್ತಿದ್ದರೆ ಎಂದು ತೀಕ್ಷ್ಣವಾಗಿ ನುಡಿದು, ಇನ್ನಾದರು ಸರ್ಕಾರ ನೊಂದವರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಜೀವಹಾನಿಯಾದಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಮೊಕದ್ದಮೆ
ಮುಂಬರುವ ದಿನಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆ ಸೇರಿದಂತೆ ವನ್ಯ ಜೀವಿಗಳ ಹಾವಳಿಯಿಂದ ಜೀವಹಾನಿಯಾದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ರೈತ ಮುಖಂಡರು ಪ್ರತಿಭಟನೆಯ ಸಂದರ್ಭ ಎಚ್ಚರಿಕೆ ನೀಡಿದರು.
ಪ್ರಸ್ತುತ ಜಿಲ್ಲೆಯ ಕಾಫಿ ತೋಟಗಳಲ್ಲಿ ಇರುವ ಸಸ್ಯ ಸಮೃದ್ಧಿ ಅರಣ್ಯ ಪ್ರದೇಶಗಳಲ್ಲಿ ಇಲ್ಲವೆಂದು ಲೇವಡಿ ಮಾಡಿದ ಪ್ರತಿಭಟನಾಕಾರರು, ಅರಣ್ಯ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕಾರ್ಯನಿರ್ವಹಿಸುವುದಲ್ಲದ, ಅವರಿಗೆ ಕಾಡಿನ ಒಳಗೆ ಕಾರ್ಯನಿರ್ವಹಿಸುವಂತೆ ಮಾಡಬೇಕೆಂದು ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ ಘಟನೆ ನಡೆಯಿತು.
ರೈತನ ಎದೆಗೆ ಈಟಿ
ಬೆಳೆಗಾರರ ಪ್ರತಿಭಟನೆ ಸಂದರ್ಭ ಅರಣ್ಯ ಇಲಾಖೆಯನ್ನು ಲೇವಡಿ ಮಾಡುವ ಪ್ರಾಸಬದ್ಧ ಘೋಷಣೆಗಳು ಗಮನ ಸೆಳೆದವು.
ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಅವರು ‘ರೈತನ ಎದೆಗೆ ಈಟಿ, ಅರಣ್ಯ ಅಧಿಕಾರಿಗಳ ಮನೆಗೆ ಬೀಟಿ, ಕಾರ್ಮಿಕ ಮನೆಗೆ ರೋಗ, ನಿಮ್ಮ ಮನೆಗೆ ತೇಗ’ ಎಂದು ಘೋಷಣೆ ಮೊಳಗಿಸಿದಾಗ ಪ್ರತಿಭಟನಾಕಾರರು ಅದಕ್ಕೆ ಸಾಥ್ ನೀಡಿ ಗಮನ ಸೆಳೆದರು.







