ಮುಂಬೈಯ ‘ಕಡಾರ್ ಚಿತ್ರೋತ್ಸವ’ಕ್ಕೆ ತುಳು ಕಿರುಚಿತ್ರ ‘ಆಸೆ’ ಆಯ್ಕೆ

ಕಾಸರಗೋಡು, ಫೆ.23: ಉಪ್ಪಳ ಸಮೀಪದ ಪ್ರತಾಪ್ ನಗರದ ಗೋಕುಲ್ ಕೃಷ್ಣನ್ ಆಚಾರ್ಯ ಹಾಗು ತಂಡದ ತುಳು ಕಿರುಚಿತ್ರ ‘ಆಸೆ’ ಮುಂಬೈಯ ‘ಕಡಾರ್ ಚಿತ್ರೋತ್ಸವ’ಕ್ಕೆ ಆಯ್ಕೆಯಾಗಿದೆ. 100ಕ್ಕೂ ಹೆಚ್ಚು ಕಿರುಚಿತ್ರಗಳು ಭಾಗವಹಿಸಿದ್ದ ಪ್ರಾಥಮಿಕ ಸುತ್ತಿನ ಸ್ಪರ್ಧೆಯಲ್ಲಿ ಆಯ್ಕೆಯಾದ 15 ಕಿರುಚಿತ್ರಗಳಲ್ಲಿ ‘ಆಸೆ’ ಒಂದಾಗಿದೆ.
ಗೋಕುಲ್ ಕೃಷ್ಣನ್ ಆಚಾರ್ಯ ಹಾಗು ಉಪ್ಪಳ ಪ್ರತಾಪ್ ನಗರದ ಅವರ ಗೆಳೆಯರು ಈ ಚಿತ್ರದ ರೂವಾರಿಗಳು. ಈಗಾಗಲೇ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ‘ಆಸೆ’ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, 12 ಸಾವಿರ ವೀವ್ಸ್ ಲಭಿಸಿದೆ. ಬಡ ವಿದ್ಯಾರ್ಥಿಯೊಬ್ಬನ ಆಸೆ ಹಾಗು ಕನಸಿನ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದ್ದು, ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟೋನ್ಸೆ ಸ್ರಾಜನ್ ಕುಮಾರ್ ‘ಆಸೆ’ಗೆ ಸಂಗೀತ ನೀಡಿದ್ದು, ನಿತೀಶ್ ಕೋತಿರಿ ಹಾಗು ಮಾರ್ಟಿನ್ ಮ್ಯಾಥ್ಯೂ ಛಾಯಾಗ್ರಾಹಕರು. ಕಥೆ, ಸೌಂಡ್ ಡಿಸೈನ್ ಹಾಗು ನಿರ್ದೇಶನ ಗೋಕುಲ್ ಕೃಷ್ಣನ್ ಆಚಾರ್ಯರದ್ದು.
ಚಿತ್ರದ ಪ್ರಮುಖ ಪಾತ್ರಗಳಾಗಿ ಮೋಕ್ಷಿತ್ ಶೆಟ್ಟಿ, ಉದಯ ಶೆಟ್ಟಿ ಹಾಗು ಭಾರತಿ ಶೆಟ್ಟಿ ನಟಿಸಿದ್ದಾರೆ. ಮೋಕ್ಷಿತ್ ಶೆಟ್ಟಿಯವರ ನಟನೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರಕ್ಕೆ ಡಬ್ಬಿಂಗ್ ನೀಡಿದವರಲ್ಲಿ ನಟಿ, ಹಾಗು ವಿಜೆ ಶೀತಲ್ ನಾಯಕ್ ಒಬ್ಬರಾದರೆ ಮತ್ತೊಬ್ಬರು ‘ಮಂಗಳೂರು ಮೀನನಾಥ’ ಖ್ಯಾತಿಯ ರಾಘವೇಂದ್ರ.
‘ಡಾರ್ಕ್ ಕ್ರಿಯೇಶನ್ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಫೆ.24ರಂದು ‘ಕಡಾರ್’ ಕಿರುಚಿತ್ರ ಪ್ರದರ್ಶನದಲ್ಲಿ ತುಳುವಿನ ‘ಆಸೆ’ ಕೂಡ ಪ್ರದರ್ಶನಗೊಳ್ಳಲಿದೆ. ಮುಂಬೈಯ ಡಿಜಿ ಕೇತನ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.
‘ಆಸೆ’ ಕಿರುಚಿತ್ರವನ್ನು ‘ಡಾರ್ಕ್ ಕ್ರಿಯೇಶನ್ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.







