ತಂದೆಯ ಅಧ್ಯಕ್ಷತೆಯಿಂದ ವ್ಯವಹಾರಕ್ಕೆ ಹಿನ್ನಡೆ: ಟ್ರಂಪ್ ಪುತ್ರ
ಮುಂಬೈ, ಫೆ.23: ತಂದೆ ಅಮೆರಿಕದ ಅಧ್ಯಕ್ಷರಾಗಿರುವುದರಿಂದ ತಮ್ಮ ಕುಟುಂಬದ ವ್ಯವಹಾರಕ್ಕೆ ಹಿನ್ನಡೆಯಾಗಿದೆ ಎಂದು ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಜಾನ್ ಟ್ರಂಪ್ ಜೂನಿಯರ್ ತಿಳಿಸಿದ್ದಾರೆ. ಅಧ್ಯಕ್ಷತೆಯ ಅವಧಿ ಮುಗಿದ ನಂತರ ತಂದೆ ತಮ್ಮ ಕುಟುಂಬದ ವ್ಯವಹಾರಕ್ಕೆ ಮರಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 2017ರ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದ ಟ್ರಂಪ್ ಸಂಸ್ಥೆಯು ಭಾರತದೊಂದಿಗೆ ಯಾವುದೇ ಹೊಸ ಯೋಜನೆಗೆ ಸಹಿ ಹಾಕಿಲ್ಲ. ಟ್ರಂಪ್ ಶ್ವೇತಭವನದಲ್ಲಿ ಇರುವವರೆಗೆ ಅವರ ಸಂಸ್ಥೆಯು ಯಾವುದೇ ವಿದೇಶಿ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದು ಕಳೆದ ವರ್ಷ ಅವರು ಘೋಷಿಸಿದ್ದರು ಎಂದು ಜೂನಿಯರ್ ಟ್ರಂಪ್ ತಿಳಿಸಿದ್ದಾರೆ. ತಮ್ಮ ಸಂಸ್ಥೆಗೆ ಭಾರತೀಯ ಮಾರುಕಟ್ಟೆಯು ಎಷ್ಟು ಮಹತ್ವದ್ದಾಗಿದೆ ಎಂದು ವಿವರಿಸಿದ ಟ್ರಂಪ್ನ ಹಿರಿಯ ಪುತ್ರ, ನಾವು ವ್ಯವಹಾರಕ್ಕೆ ಮರಳಿದಾಗ ಭಾರತವು ನಮಗೆ ಪ್ರಮುಖ ಮಾರುಕಟ್ಟೆಯಾಗಲಿದೆ ಎಂದು ತಿಳಿಸಿದ್ದಾರೆ. ಅವರು ಟ್ರಂಪ್ ಸಂಸ್ಥೆಯ ಸ್ಥಳೀಯ ಜೊತೆಗಾರ ಸಂಸ್ಥೆಯಾದ ಲೋಧಾ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಲೋಧಾ ಗ್ರೂಪ್ ಭಾರತದಲ್ಲಿ ಮೊದಲ ಟ್ರಂಪ್ ಟವರನ್ನು ನಿರ್ಮಿಸಲಿದೆ. ಭಾರತದ ಜೊತೆ ಸಂಬಂಧವನ್ನು ಅಭಿವೃದ್ಧಿಪಡಿಸಲು ಕಳೆದೊಂದು ದಶಕದಿಂದ ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವುದಾಗಿ ಟ್ರಂಪ್ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷರಾಗಿರುವ ಜೂನಿಯರ್ ಟ್ರಂಪ್ ತಿಳಿಸಿದ್ದಾರೆ. ಭಾರತವು ವೈಭವೋಪೇತ ಯೋಜನೆಗಳನ್ನು ಹೊಂದಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಅದು ಜಾಗತಿಕ ದರ್ಜೆಯನ್ನು ತಲುಪಲು ಪ್ರಯತ್ನಿಸುತ್ತಿದೆ ಎಂದು ಜೂ. ಟ್ರಂಪ್ ಅಭಿಪ್ರಾಯಿಸಿದ್ದಾರೆ. ಮುಂಬೈಯ ಯೋಜನೆಯ ಹೊರತಾಗಿ ಟ್ರಂಪ್ ಸಂಸ್ಥೆಯು ಪುಣೆ, ಗುರುಗ್ರಾಮ್ ಮತ್ತು ಕೊಲ್ಕತ್ತಾದಲ್ಲೂ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ. ಈ ಯೋಜನೆಗಳಲ್ಲಿ ನ್ಯೂಯಾರ್ಕ್ ಮೂಲದ ಟ್ರಂಪ್ ಸಂಸ್ಥೆಯು ಸ್ಥಳೀಯ ಸಂಸ್ಥೆಗಳಾದ ಪಂಚಶೀಲ ರಿಯಲ್ಟಿ, ಎಂ3ಎಂ, ತ್ರಿಬೆಕ, ಯೂನಿಮಾರ್ಕ್ ಮತ್ತು ಐಆರ್ಇಒ ಮುಂತಾದುವುಗಳ ಜೊತೆ ಜೊತೆಗಾರಿಕೆ ಮಾಡಿಕೊಳ್ಳಲಿದೆ.