ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಮಹಿಳೆಯರು ಹೆಚ್ಚಿನ ಪಾತ್ರ ವಹಿಸಬೇಕಿದೆ: ಉಮಾ ಪ್ರಶಾಂತ್
ಮಿಸ್ಬಾ ಮಹಿಳಾ ಕಾಲೇಜ್: ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಕಾಟಿಪಳ್ಳ, ಫೆ. 23: ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಗುರುವಾರ ಕಾಟಿಪಳ್ಳದ ಮಿಸ್ಬಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಿತು.
ಪೊಲೀಸ್ ಡೆಪ್ಯುಟಿ ಕಮಿಶನರ್ (ಸಂಚಾರ ಮತ್ತು ಅಪರಾಧ) ಉಮಾ ಪ್ರಶಾಂತ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಮಹಿಳೆಯರು ಇನ್ನಷ್ಟು ಹೆಚ್ಚಿನ ಪಾತ್ರ ವಹಿಸಬೇಕಿದೆ ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಸಂಚಾರ ವಿಭಾಗದ ಅಸಿಸ್ಟಂಟ್ ಕಮಿಶನರ್ ಮಂಜುನಾಥ್ ಶೆಟ್ಟಿ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿ, ಇಲಾಖೆಯ ಮೂಲಕ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸುವ ಭರವಸೆ ನೀಡಿದರು. ಕಳೆದ ಮೂರು ವರ್ಷಗಳಿಂದ ಸಂಚಾರ ಸುರಕ್ಷತೆಯ ಬಗ್ಗೆ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳ ವಿವರಗಳನ್ನು ಮಂಗಳೂರು ಉತ್ತರ ಸಂಚಾರ ಠಾಣೆಯ ನಿರೀಕ್ಷಕ ಮಂಜುನಾಥ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಅಪಘಾತ ಸಂದರ್ಭಗಳಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವ ಹಾಗೂ ಸಂಚಾರ ಸುರಕ್ಷತೆಯ ಕಾರ್ಯದಲ್ಲಿ ಕೈಜೋಡಿಸುವ 25 ಜೀವರಕ್ಷಕರನ್ನು ಈ ಸಂದರ್ಭ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಸತೀಶ್ ಸದಾನಂದ್ ಕೃತಜ್ಞತೆ ಸಲ್ಲಿಸಿದರು. ಚೇಳಾಯರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಯಿ ಕಿರಣ್ ಸಂಚಾರ ಸುರಕ್ಷತೆಯಲ್ಲಿ ವಾಹನ ಸವಾರರ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು.
ಮಿಸ್ಬಾ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಮುಮ್ತಾಝ್ ಅಲಿ ಅಧ್ಯಕ್ಷತೆ ವಹಿಸಿದ್ದು, ಇಂತಹ ಮಹತ್ವದ ಕಾರ್ಯಕ್ರಮಗಳಿಗೆ ಮಿಸ್ಬಾ ಮಹಿಳಾ ಕಾಲೇಜಿನ ಸಹಕಾರ ನೀಡುವುದಾಗಿ ಹೇಳಿದರು.
ಕಾಲೇಜಿನ ಸಂಚಾಲಕ ನಝೀರ್, ಆಡಳಿತ ಮಂಡಳಿಯ ಸದಸ್ಯ ಹಕೀಮ್, ರೋಟರಿ ಸುರತ್ಕಲ್ ಅಧ್ಯಕ್ಷ ಡಾ. ಹರಿಕೃಷ್ಣನ್ ಅತಿಥಿಗಳಾಗಿದ್ದರು. ನಾಗರಿಕ ಸಲಹಾ ಸಮಿತಿಯ ಸಂಚಾಲಕ ಪ್ರೊ. ರಾಜ ಮೋಹನ್ ರಾವ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗುಣವತಿ ವಂದಿಸಿದರು. ಮಾಲತಿ ಸಚ್ಚಿದಾನಂದ್ ಬಹುಮಾನ ವಿಜೇತರ ಪಟ್ಟಿ ಓದಿದರು. ರೊ. ಸಚ್ಚಿದಾನಂದರ ಸಂಯೋಜನೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಗೆದ್ದ 65 ಶಾಲೆಗಳ 425 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನಗಳ ಮತ್ತು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮಿಸ್ಬಾ ಕಾಲೇಜಿನ ಆಡಳಿತ ಮಂಡಳಿ ವಹಿಸಿಕೊಂಡಿತ್ತು.







