ಬಿಯೋಂಡ್ ದಿ ಕ್ಲೌಡ್ಸ್ ಎಪ್ರಿಲ್ 20ರಂದು ಬಿಡುಗಡೆ

‘ಚಿಲ್ಡ್ರನ್ಸ್ ಆಫ್ ಹೆವನ್’ನಂತಹ ಕ್ಲಾಸಿಕ್ ಚಿತ್ರಗಳನ್ನು ನೀಡಿರುವ ವಿಶ್ವವಿಖ್ಯಾತ ಇರಾನಿ ನಿರ್ದೇಶಕ ಮಜೀದ್ ಮಜೀದಿ ಅವರ ನೂತನ ಚಿತ್ರವಾದ ‘ಬಿಯೊಂಡ್ ದಿ ಕ್ಲೌಡ್ಸ್’ ಬಗ್ಗೆ ಭಾರತೀಯ ಚಿತ್ರ ರಂಗದಲ್ಲಿ ಅಪಾರ ಕುತೂಹಲ ಮೂಡಿದೆ. ಸಂಪೂರ್ಣವಾಗಿ ಭಾರತದಲ್ಲೇ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಇಶಾನ್ ಕಟ್ಟರ್ ಹಾಗೂ ಮಾಲವಿಕಾ ಮೋಹನ್ ಎಂಬ ಹೊಸ ಮುಖಗಳ ಪರಿಚಯವಾಗುತ್ತಿದೆ. ಮೊದಲಿಗೆ ಮಾರ್ಚ್ 23ರಂದು ‘ಬಿಯೊಂಡ್ ದಿ ಕ್ಲೌಡ್ಸ್’ ಅನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಚಿತ್ರ ಎಪ್ರಿಲ್ 20ರಂದು ಭಾರತ ಸೇರಿದಂತೆ ವಿಶ್ವಾದ್ಯಂತ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಝೀ ಸ್ಟುಡಿಯೋಸ್ ಹಾಗೂ ನಮಹ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವು ಮಜೀದಿಯವರ ಚೊಚ್ಚಲ ಭಾರತೀಯ ನಿರ್ಮಾಣದ ಚಿತ್ರವಾಗಿದೆ. ಮುಂಬೈಯ ಕೊಳೆಗೇರಿಯ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವು ಸಹೋದರ ಹಾಗೂ ಸಹೋದರಿಯ ಮಧುರ ಬಾಂಧವ್ಯವನ್ನು ಹಾಗೂ ತಮಗೆ ಎದುರಾಗುವ ಕಠಿಣ ಸನ್ನಿವೇಶಗಳ ನಡುವೆಯೂ ಸಂತಸವನ್ನು ಕಂಡುಕೊಳ್ಳುವ ಹೃದಯಸ್ಪರ್ಶಿ ಕಥೆಯನ್ನು ಈ ಚಿತ್ರ ಹೊಂದಿದೆ.
ಬಿಯೋಂಡ್ ದಿ ಕ್ಲೌಡ್ಸ್ ಅಪ್ಪಟ ಭಾರತೀಯ ಹಿನ್ನೆಲೆಯ ಕಥೆಯನ್ನು ಹೊಂದಿದೆ. ಆದಾಗ್ಯೂ ಜಗತ್ತಿನ ಯಾವ ಮೂಲೆಗೂ ಪ್ರಸ್ತುತವೆನಿಸಲ್ಪಡುವಂತಹ ಮಾನವೀಯ ಅಂತಃಕರಣದ ಕಥೆಯಿದಾಗಿದೆಯೆಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಶರೀನ್ ಮಂತ್ರಿ ಕೇಡಿಯಾ ಹೇಳಿಕೊಂಡಿದ್ದಾರೆ.





