ಸುಪ್ರೀಂ ಕೋರ್ಟ್ ತೀರ್ಪಿಗೆ ಮರುಪರಿಶೀಲನೆ ಅರ್ಜಿ ಅಗತ್ಯ: ಪ್ರೊ.ರವಿವರ್ಮಕುಮಾರ್
ಕಾವೇರಿ ನೀರು ಹಂಚಿಕೆ ವಿವಾದ

ಬೆಂಗಳೂರು, ಫೆ. 24: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕಣ್ಣೊರೆಸುವ ತಂತ್ರವೇ ವಿನಃ ಸ್ವಾಗತಾರ್ಹವಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೋರ್ಟ್ ನೀಡಿರುವ ತೀರ್ಪಿನ ಕುರಿತು ರಾಜ್ಯ ಸರಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಾದ ಅಗತ್ಯವಿದೆ ಎಂದು ಸಂವಿಧಾನ ತಜ್ಞ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ವಕೀಲರ ಸಂಘ, ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ತೀರ್ಪು ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಮಹತ್ವದ ಅಂಶಗಳಿಂದ ಕೂಡಿಲ್ಲ. ಕರ್ನಾಟಕಕ್ಕೆ 14.5 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಿರುವುದು ಹೊರತು ಪಡಿಸಿ, ಮತ್ಯಾವ ಅಂಶಗಳ ಕುರಿತು ಬೆಳಕು ಚೆಲ್ಲಿಲ್ಲ. ಕಾವೇರಿ ನ್ಯಾಯಾಧೀಕರಣ ನೀಡಿರುವ ತೀರ್ಪನ್ನೇ ಯಥಾವತ್ತಾಗಿ ಪ್ರಕಟಿಸಿರುವುದು ಸುಪ್ರೀಂ ಕೋರ್ಟ್ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ಆರು ತಿಂಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಈ ಆದೇಶ ಯಥಾವತ್ತಾಗಿ ಜಾರಿಯಾದರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಿರುವ ಕೆಆರ್‌ಎಸ್ ಸೇರಿದಂತೆ ಹೇಮಾವತಿ, ಹಾರಂಗಿ ಜಲಾಶಯಗಳು ರಾಜ್ಯ ಸರಕಾರದ ಕೈ ತಪ್ಪಲಿದೆ. ಹೀಗಾಗಿ ಈ ಬಗ್ಗೆ ರಾಜ್ಯ ಸರಕಾರ ಸರ್ವಪಕ್ಷಗಳ ನಿಯೋಗ ಕರೆದು ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಎಂದು ಅವರು ಹೇಳಿದರು.
ಮಾಜಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಮಾತನಾಡಿ, ಕಾವೇರಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು, ಮಹದಾಯಿ, ಕೃಷ್ಣ ನದಿ ಹಂಚಕೆ ಸೇರಿದಂತೆ ಜಲವಿವಾದಗಳಿಗೆ ಬಗೆ ಹರಿಸುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ವಕೀಲ ಗಂಗಾಧರ್, ಗಾಂಧಿ ಭವನದ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮತ್ತಿತರರಿದ್ದರು.
‘ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ರಾಜ್ಯದ ಹಲವು ಮಂದಿ ಕಾನೂನು ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. ತೀರ್ಪಿನ ಕುರಿತು ಮರುಪರಿಶೀಲನೆ ಅರ್ಜಿ ಸಲ್ಲಿಸಲು ಮನವಿ ಮಾಡಿದ್ದಾರೆ. ಹೀಗಾಗಿ ಕಾನೂನು ತಜ್ಞರ ಅಭಿಪ್ರಾಯವನ್ನು ಸಿಎಂ ಸಿದ್ದರಾಮಯ್ಯರಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಲಿದ್ದೇವೆ’
-ದಿನೇಶ್ ಗುಂಡೂರಾವ್







