ಫರಂಗಿಪೇಟೆ: ಚೂರಿ ಇರಿತ ಪ್ರಕರಣ; ಆರೋಪಿ ಸೆರೆ
ಬಂಟ್ವಾಳ, ಫೆ.21: ಫರಂಗಿಪೇಟೆಯ ಯುವಕನೊಬ್ಬನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ಬಿ.ಸಿ.ರೋಡಿನ ಕೈಕಂಬದ ಬಳಿ ನಡೆದಿದೆ.
ಬಿ.ಸಿ.ರೋಡಿನ ನಿವಾಸಿ ಶಮೀರ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಕೊಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಿ.ಸಿ.ರೋಡಿನ ಕೈಕಂಬದ ಬಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತದನಂತರ ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ಘಟನೆ: ತಂಡವೊಂದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಫರಂಗಿಪೇಟೆಯ ಒಳಮಾರ್ಗದ ಮೈದಾನದ ಬಳಿ ಬುಧವಾರ ರಾತ್ರಿ ನಡೆದಿದ್ದು, ಇದರಿಂದ ಫರಂಗಿಪೇಟೆ ನಿವಾಸಿ ಇರ್ಫಾನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





