ಭಾರತದ ಪ್ರಥಮ 3ಡಿ ತಾರಾಲಯದಲ್ಲಿ ಪ್ರಾಯೋಗಿಕ ಪ್ರದರ್ಶನ
3ಡಿ ಮೋಡಿ ಮಾಡಲಿದೆ ನಭೋಮಂಡಲದ ವಿಸ್ಮಯ !

ಮಂಗಳೂರು, ಫೆ. 24: ನವಗ್ರಹ ತಾರೆಗಳು, ನಕ್ಷತ್ರ ಪುಂಜ, ಸೂರ್ಯ, ಚಂದ್ರ ಸೇರಿದಂತೆ ನಭೋಮಂಡಲದ ವಿಸ್ಮಯಗಳ ಒಂದೇ ಎರಡೇ ? ನಮ್ಮ ಕಣ್ಣಿನಿಂದ ದೂರವಿರುವ ಈ ತಾರಾಲೋಕದ ವಿಸ್ಮಯವನ್ನು 3ಡಿ ಮೂಲಕ ಪ್ರದರ್ಶಿಸಲು ಭಾರತದ ಪ್ರಥಮ 3ಡಿ 8ಕೆ ಯುಎಚ್‌ಡಿಯ ಹೈಬ್ರೀಡ್ ತಂತ್ರಜ್ಞಾನದ ತಾರಾಲಯ ಸರ್ವಸನ್ನದ್ಧವಾಗಿದೆ.
ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ ಭಾರತದ ಪ್ರಥಮ 3ಡಿ ತಾರಾಲಯದಲ್ಲಿ ಇಂದು ಪ್ರಾಯೋಗಿಕ ಪ್ರದರ್ಶನವನ್ನು ಆಯೋಜಿಸಲಾಯಿತು.
ಶಾಸಕ ಜೆ.ಆರ್. ಲೋಬೋ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪಿಲಿಕುಳ ವಿಜ್ಞಾನ ಕೇಂದ್ರದ ಡಾ. ಕೆ.ವಿ. ರಾವ್ ಉಪಸ್ಥಿತಿಯಲ್ಲಿ ಪತ್ರಕರ್ತರಿಗೆ ಪ್ರಾಯೋಗಿಕ ಪ್ರದರ್ಶನವನ್ನು ತಾರಾಲಯದ ಮುಖ್ಯಸ್ಥರಾದ ಅಭಿನವ್ ಅವರು ಮಾಹಿತಿಯೊಂದಿಗೆ ನೀಡಿದರು.
ವ್ಯೋಮ ಮತ್ತು ಕಾಲದ ಪಯಣ !
ಆಕಾಶ ಕಾಯಗಳ ಬಗ್ಗೆ ಸಂಶೋಧನೆ, ತಜ್ಞರಿಗೆ ಹೊರತುಪಡಿಸಿ ಪ್ರೌಢಶಾಲಾ ವಿದ್ಯಾಭ್ಯಾಸದ ವೇಳೆ ನಭೋಮಂಡಲದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವೆಲ್ಲಾ ಪಡೆದುಕೊಂಡಿರುತ್ತೇವೆ. ಮಾನವ ಮತ್ತು ವಿಶ್ವದ ನಡುವಿನ ನಂಟಿನ ಬಗ್ಗೆ ತಾರಾಲಯದ ‘ನಾವು ನಕ್ಷತ್ರಗಳು’ ಎಂಬ ಶೀರ್ಷಿಕೆಯ ಪ್ರದರ್ಶನ ಸಮಗ್ರ ಮಾಹಿತಿಯನ್ನು ಒದಗಿಸಲಿದೆ.
ಸುಮಾರು 25 ನಿಮಿಷಗಳ ಈ ಪ್ರದರ್ಶನದಲ್ಲಿ ಭೂಮಿ ಆರಂಭಗೊಳ್ಳುವ ಮೊದಲಿನ ರೂಪಾಂತರದ ಬಗ್ಗೆ ಈ ಪ್ರದರ್ಶನ ಎಳೆಎಳೆಯಾಗಿ ಅದರಲ್ಲೂ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾದ ವಿವರಣೆಯೊಂದಿಗೆ 3ಡಿ ಪ್ರದರ್ಶನ ವೀಕ್ಷಕರಿಗೆ ಮೋಡಿ ಮಾಡಲಿದೆ. 13.8 ಬಿಲಿಯನ್ ವರ್ಷಗಳ ಹಿಂದೆ ಒಂದು ಸಣ್ಣ ಬಿಂದುವಿನೊಂದಿಗೆ ವಿಸ್ತಾರಗೊಂಡ ವಿಶ್ವದ ಆರಂಭ, ವಿಶ್ವ ಪರಿವರ್ತನೆಗೊಳ್ಳುವ ಪರಿ, ಶಕ್ತಿಯ ಸಾಂದ್ರೀಕರಣದೊಂದಿಗೆ ಇಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್‌ಗಳ ಸೃಷ್ಟಿ, ಬಳಿಕ ಪರಮಾಣು, ಅಣುಗಳ ಸೃಷ್ಟಿ, ಗ್ಯಾಲಕ್ಷಿಯ ರಚನೆ, ಆ ಮೂಲಕ ನಕ್ಷತ್ರಗಳು ಉಗಮ,ಹೈಡ್ರೋಜನ್ ಪರಮಾಣುಗಳ ಸೃಷ್ಟಿ, ಅಣುಗಳ ಸೃಷ್ಟಿ, ಬಳಿಕ ಸೂಪರ್ ನೋವಾದ ಸೃಷ್ಟಿ, ಹೀಗೆ ಸಾಗುವ ಸೃಷ್ಟಿಯ ಪಯಣ ಕೊನೆಗೆ ಭೂಮಿ, ಸಮುದ್ರ, ಜಲಚರಗಳ ಮೂಲಕ ಮಾನವನ ಸೃಷ್ಟಿಗೆ ಕಾರಣವಾಗುವ ಬಗೆಯನ್ನು ಕನ್ನಡ ಭಾಷೆಯ ವಿವರಣೆಯೊಂದಿಗೆ 3ಡಿ ಪ್ರದರ್ಶನ ವಿಜ್ಞಾನದ ಕೌತುವನ್ನು ತೆರೆದಿಡುತ್ತಾ ಸಾಗುತ್ತದೆ.
ಹೀಗೆ ತಾರಾಲಯದಲ್ಲಿ ಮಾ. 2ರಿಂದ ಈ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಆರಂಭದಲ್ಲಿ ಪ್ರತಿದಿನ ನಾಲ್ಕರಿಂದ ಆರು ಪ್ರದರ್ಶನ ಗಳನ್ನು (ತಲಾ 25 ನಿಮಿಷಗಳು) ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ನಾಲ್ಕು ತಾರಾ ಲೋಕಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರದರ್ಶನ ನಡೆಯಲಿದೆ.
ನಾಲ್ಕೈದು ತಿಂಗಳ ಅವಧಿಯಲ್ಲಿ ಪ್ರದರ್ಶನಗಳ ವಿಷಯಗಳಲ್ಲಿ ಬದಲಾವಣೆಯೊಂದಿಗೆ ಹೊಸ ವಿಷಯಗಳ ಪ್ರದರ್ಶನಗಳು ಸೇರ್ಪಡೆಗೊಳ್ಳಲಿವೆ. 18 ಮೀಟರ್ ವ್ಯಾಸದ ಆಧುನಿಕ ತಂತ್ರಜ್ಞಾನದ ನ್ಯಾನೊ ಸಿಮ್ ಡೋಮ್ ಅನ್ನು 15 ಡಿಗ್ರಿ ಕೋನದಲ್ಲಿ ಈ ತಾರಾಲಯದಲ್ಲಿ ಇರಿಸಲಾಗಿದೆ. ಈ ತಾರಾಲಯವು ಅಪ್ಪೋ- ಮೆಕಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನಂ ಸಿಸ್ಟಂಗಳನ್ನು ಅಳವಡಿಸಿದ್ದು, ಹೈಬ್ರೀಡ್ 3ಡಿ ಆ್ಯಕ್ಟೀವ್ ಮೂಲಕ ವೀಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ ಎಂದು ಎಂದು ಪ್ರಾಯೋಗಿಕ ಪ್ರದರ್ಶನದ ಬಳಿಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾಹಿತಿ ನೀಡಿದರು.
ಮಾ. 1ರಂದು ಉದ್ಘಾಟನೆ
ಮಾ. 1ರಂದು ಬೆಳಗ್ಗೆ 10.30ಕ್ಕೆ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ, ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ನೂತನ ತಾರಾಲಯವನ್ನು ಲೋಕಾರ್ಪಣೆಗೊಳಿಸುವರು. ಅಧ್ಯಕ್ಷತೆಯನ್ನು ಶಾಸಕ ಅಭಯಚಂದ್ರ ಜೈನ್ ವಹಿಸಲಿದ್ದಾರೆ.
ಇದೇ ವೇಳೆ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ರಾಜ್ಯ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಮಪಾಲಿನಲ್ಲಿ ವಿಜ್ಞಾನ ಕೇಂದ್ರದಲ್ಲಿ ನಿರ್ಮಾಣವಾಗಲಿರುವ ಇನ್ನೋವೇಶನ್ ಹಬ್‌ನ ಪ್ರಥಮ ಹಂತದ ಉದ್ಘಾಟನೆ ನಡೆಯಲಿದೆ. ಈ ಸಂದರ್ಭ ಅಂತರಿಕ್ಷ ಕಾರ್ಪೊರೇಶನ್ ಲಿಮಿಟೆಡ್‌ನಿಂದ ಪ್ರಾಯೋಜಿತ ವಸ್ತು ಪ್ರದರ್ಶನವು ಇಸ್ರೋ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯಲಿದೆ. ಇತರ ಸಂಸ್ಥೆಗಳು ಸಹ ತಮ್ಮ ಡಿಜಿಟಲ್ ಮತ್ತ ಇತರ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ. ಡಿಜಿಟಲ್ ಸಂಚಾರಿ ತಾರಾಲಯದ ವೀಕ್ಷಣೆಯನ್ನು ಸಹ ಆಯೋಜಿಸಲಾಗಿದೆ. ಇದರೊಂದಿಗೆ ಇಸ್ರೋ ತಂಡದಿಂದ ‘ವಾಟರ್ ರಾಕೆಟ್’ ಪ್ರಾತ್ಯಕ್ಷಿಕೆ ಮತ್ತು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ತಂಡದಿಂದ ದ್ರೋಣ್ ಹಾರಾಟ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ತಾರಾಲಯದ ಮುಖ್ಯಸ್ಥರಾದ ಅಭಿನವ್ ತಿಳಿಸಿದರು.
ವಿಶೇಷ ಪ್ಯಾಕೇಜ್ ಟಿಕೆಟ್: ಫೆ. 27ರಿಂದ ಆನ್‌ಲೈನ್‌ಲ್ಲಿ ಟಿಕೆಟ್ ಲಭ್ಯ
ಪಿಲಿಕುಳಕ್ಕೆ ಆಗಮಿಸುವ ಸಂದರ್ಶಕರಿಗೆ ಪ್ರವೇಶ ದ್ವಾರದ ಬಲ ಬದಿಯಲ್ಲಿರುವ ಕೌಂಟರ್‌ನಲ್ಲಿ ಟಿಕೆಟ್ ನೀಡಲಾಗುವುದು. ಇದಲ್ಲದೆ ವಿಶೇಷ ಪ್ಯಾಕೇಜ್ ಆಗಿ ಪಿಲಿಕುಳದ (ಮೃಗಾಲಯ, ವಿಜ್ಞಾನ ಕೇಂದ್ರ, ದೋಣಿ ವಿಹಾರ ಮತ್ತು ತಾರಾಲಯ) ಎಲ್ಲಾ ವಿಭಾಗಗಳಿಗೆ 100 ರೂ.ಗಳ ವಿಶೇಷ ಪ್ಯಾಕೇಜ್‌ನಡಿ ಟಿಕೆಟ್ ಆರಂಭಿಸಲಾಗುತ್ತಿದೆ. ಮಾತ್ರವಲ್ಲದೆ ಫೆ. 27ರಿಂದ ಟಿಕೆಟ್‌ಗಳು ಬುಕ್‌ಮೈ ಶೋನಲ್ಲಿ ಆನ್‌ಲೈನ್‌ನಲ್ಲಿ ಮುಂಗಡವಾಗಿ ಕಾದಿರಿಸಬಹುದಾಗಿದೆ.
ತಾರಾಲಯಕ್ಕೆ ಮಕ್ಕಳ ಟಿಕೆಟ್ ದರ ಪ್ರದರ್ಶನವೊಂದಕ್ಕೆ 20 ರೂ.ಗಳಾಗಿದ್ದು, ದೊಡ್ಡವರಿಗೆ 60 ರೂ.ಗಳನ್ನು ಪ್ರಸ್ತುತ ನಿಗದಿಪಡಿಸಲಾಗಿದೆ. ಶಾಲೆಗಳಿಂದ ಗುಂಪಾಗಿ ಬರುವ ವಿದ್ಯಾರ್ಥಿಗಳಿಗೆ ಈ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗುವುದು. ಮಾತ್ರವಲ್ಲದೆ ವಾರದಲ್ಲಿ 2 ಶಾಲೆಗಳಿಗೆ ತಾರಾಲಯ ಭೇಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಏಕಕಾಲದಲ್ಲಿ 170 ಮಂದಿಗೆ ಪ್ರದರ್ಶನ ವೀಕ್ಷಿಸಲು ಆಸನದ ವ್ಯವಸ್ಥೆಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಿಲಿಕುಳದ ನಿರ್ವಹಣೆಗೆ ಅಭಿವೃದ್ಧಿ ಪ್ರಾಧಿಕಾರ
ಪಿಲಿಕುಳದ ಸಮಗ್ರ ಹಾಗೂ ಸಮರ್ಪಕ ನಿರ್ವಹಣೆಗೆ ಪೂರಕವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ. ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸ್ಥಳೀಯ ಮೂರು ಕ್ಷೇತ್ರ (ಮಂಗಳೂರು ದಕ್ಷಿಣ, ಉತ್ತರ ಹಾಗೂ ಮೂಡುಬಿದಿರೆ)ಗಳ ಶಾಸಕರು, ಅಧಿಕಾರಿಗಳನ್ನು ಒಳಗೊಂಡು ಈ ಪ್ರಾಧಿಕಾರ ರಚನೆಯಾಗಲಿದೆ. ಇದರಿಂದ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದರು.







