ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ರ ಡಾರ್ವಿನ್ ವಾದ ಕುರಿತ ಹೇಳಿಕೆಯಲ್ಲಿ ತಪ್ಪೇನು?
ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೀಗೊಂದು ಪ್ರಶ್ನೆ!
ಕೇಂದ್ರ ಸಚಿವ ಸತ್ಯಪಾಲ್ ಸಿಂಗ್
ಪುಣೆ, ಫೆ.24: ಚಾರ್ಲ್ಸ್ ಡಾರ್ವಿನ್ರ ವಿಕಾಸವಾದವನ್ನು ವಿರೋಧಿಸಿರುವ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಹೇಳಿಕೆಯಲ್ಲಿ ತಪ್ಪಾದರೂ ಏನಿದೆ? ಹೀಗೊಂದು ಪ್ರಶ್ನೆಯನ್ನು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ನೀಡಿದ ಪರೀಕ್ಷೆಯಲ್ಲಿ ಕೇಳಿದೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಸ್ಥೆಯ ಡೀನ್, ಈ ಪ್ರಶ್ನೆಯನ್ನು ವಿದ್ಯಾರ್ಥಿಗಳ ತಾರ್ಕಿಕ ಚಿಂತನೆಯನ್ನು ಪರೀಕ್ಷಿಸುವ ಸಲುವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿರುವ ಪ್ರಶ್ನೆಯು ಈ ಹೇಳಿಕೆಯು ಯಾಕೆ ಸರಿಯಾಗಿಲ್ಲ ಎಂಬುದಕ್ಕೆ ತಾರ್ಕಿಕ ಉತ್ತರ ನೀಡುವುದಕ್ಕಾಗಿ ಕೇಳಲಾಗಿದೆ. ಇಲ್ಲಿ ಹೇಳಿಕೆಗೆ ಮಹತ್ವವಿಲ್ಲ ಎಂದು ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿರುವ ಸಂಜೀವ ಗಲಾಂಡೆ ತಿಳಿಸಿದ್ದಾರೆ.
ನಮ್ಮ ಸಂಸ್ಥೆಯಲ್ಲಿ ನಾವು ಶೈಕ್ಷಣಿಕ ವಿವೇಚನೆಯ ಕಲಿಕಾ ಪದ್ಧತಿಯನ್ನು ಅನುಸರಿಸುತ್ತೇವೆ ಮತ್ತು ಪ್ರಶ್ನೆ ಪತ್ರಿಕೆಗಳು ಪಠ್ಯಪುಸ್ತಕ ಆಧಾರಿತವಾಗಿರುವುದಿಲ್ಲ. ವಿದ್ಯಾರ್ಥಿಗಳು ಬಹಳ ಯೋಚಿಸಿ ತಾರ್ಕಿಕ ಉತ್ತರವನ್ನು ನೀಡಬೇಕಾಗುತ್ತದೆ. ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ನೇರವಾಗಿದ್ದು ವಿದ್ಯಾರ್ಥಿಗಳ ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯವನ್ನು ತಿಳಿಯಲು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಡಾರ್ವಿನ್ ವಿಕಾಸ ವಾದವು ವೈಜ್ಞಾನಿಕವಾಗಿ ತಪ್ಪಾಗಿದೆ. ಯಾಕೆಂದರೆ ನಮ್ಮ ಪೂರ್ವಜರು ಸೇರಿದಂತೆ ಯಾರೂ ಕೂಡಾ ಮಂಗ ಮಾನವನಾಗಿ ಬದಲಾಗುವ ಪ್ರಕ್ರಿಯೆಯನ್ನು ನೋಡಿದ್ದೇನೆ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಅದನ್ನು ಶಾಲಾ-ಕಾಲೇಜು ಪಠ್ಯದಲ್ಲಿ ಸೇರಿಸಬಾರದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ವಿಜ್ಞಾನಿಗಳ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ ಸಚಿವರು ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದರು.