‘ಕುಮಾರ ಭರಣ’ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಉಡುಪಿ, ಫೆ.24: ಆಯುರ್ವೇದದ ಎಂಟು ಅಂಗಗಳಲ್ಲಿ ಒಂದಾದ ಕೌಮಾರ ಭೃತ್ಯ ಅಂದರೆ ಮಕ್ಕಳ ಆರೋಗ್ಯ ಶಾಸ್ತ್ರವನ್ನು ಪ್ರಮುಖವಾಗಿ ಭೋದಿಸಿದ ವರು ಕಾಶ್ಯಪರು ಎಂದು ಮೈಸೂರಿನ ಜಿ.ಎಸ್.ಎಸ್. ಆಯು ರ್ವೇದ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ಕೌಮಾರಭೃತ್ಯ ವಿಭಾಗದ ಮುಖ್ಯಸ್ಥ ಪ್ರೊ.ಲಕ್ಷ್ಮೀಶ ಉಪಾಧ್ಯಾಯ ಹೇಳಿದ್ದಾರೆ.
ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಕೌಮಾರ ಭೃತ್ಯ(ಮಕ್ಕಳ ಆರೋಗ್ಯ) ವಿಭಾಗದ ವತಿಯಿಂದ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಜನ್ಮದಿನದ ಸಂಸ್ಮರಣಾರ್ಥವಾಗಿ ಕಾಲೇಜಿನ ಭಾವ ಪ್ರಕಾಶ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ‘ಕುಮಾರ ಭರಣ -2018’ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಗುವಿನ ಜನನದಿಂದ ಆರಂಭವಾಗಿ 16 ವರ್ಷಗಳ ತನಕ ನೀಡಬೇಕಾದ ಕಾಳಜಿ, ಪೋಷಣೆ ಇತ್ಯಾದಿ ಮತ್ತು ಮಕ್ಕಳ ಚರ್ಮರೋಗಗಳು, ನರದೌರ್ಬಲ್ಯ ದಿಂದ ಬರುವ ಕಾಯಿಲೆಗಳು, ಶ್ವಾಸ ರೋಗಗಳು ಅಲ್ಲದೆ ಬೆಳವಣಿಗೆಯ ಮೈಲುಗಲ್ಲುಗಳನ್ನು ಕುಂಠಿತಗೊಳಿಸುವ ಸಮಸ್ಯೆಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಸ್ನಾತಕೋತ್ತರ ಶಿಕ್ಷಣದ ಡೀನ್ ಪ್ರೊ.ಬಿ.ಆರ್. ದೊಡ್ಡಮನಿ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ.ಪ್ರಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ಚೇತನ್ ಕುಮಾರ್ ವಿ.ಕೆ. ವಂದಿಸಿದರು. ಉಪನ್ಯಾಸಕರಾದ ಡಾ.ಶ್ರೀನಿಧಿ ಧನ್ಯ ಹಾಗೂ ಡಾ.ಸರಿತಾ ಟಿ. ಕಾರ್ಯಕ್ರಮ ನಿರೂಪಿಸಿದರು.







