ಒತ್ತಡ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ

ಮಲ್ಪೆ, ಫೆ.24: ಮನುಷ್ಯ ಬೆಳೆಯುತ್ತಿದ್ದಂತೆ ಆತನಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆಗಳಾಗುವುದು ಸಹಜ. ಈ ಸಂದರ್ಭದಲ್ಲಿ ಅವುಗಳನ್ನು ಗೆದ್ದು ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡುವುದರಿಂದ ಬದುಕಿನಲ್ಲಿ ಯಶಸ್ವಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ದೊಡ್ಡಣಗುಡ್ಡೆ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಳಿತಾಧಿಕಾರಿ ಸೌಜನ್ಯ ಶೆಟ್ಟಿ ಹೇಳಿದ್ದಾರೆ.
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಕರ್ನಾಟಕ ಇದರ ಮಲ್ಪೆ ಘಟಕದ ವತಿಯಿಂದ ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಶಾಲೆಯ ಸಭಾಂಗಣ ದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕ್ಯಾಂಪಸ್ ಉಪನ್ಯಾಸದಲ್ಲಿ ಅವರು ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಗೇಮ್ಸ್, ಮೊಬೈಲ್, ಸಾಮಾಜಿಕ ಜಾಲತಾಣ, ಛಾಯಾಚಿತ್ರಗಳ ಚಟ ವಿಪರೀತವಾದರೆ ಅಧ್ಯಯನದ ಕಡೆ ಗಮನ ಕೊಡಲು ಆಗುವುದಿಲ್ಲ. ಪ್ರೇಮ ಸಂಬಂಧದಂತಹ ಸಮಸ್ಯೆಗಳು ಈ ವಯಸ್ಸಿನಲ್ಲಿ ಸಹಜವಾದರೂ ಶಿಕ್ಷಣದ ಕಾಲದಲ್ಲಿ ಅದರ ನಿಯಂತ್ರಣ ಅಗತ್ಯ. ಈ ಮೂಲಕ ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದರು.
ಹದಿಹರೆಯ ವರ್ತನೆ, ಹಾರ್ಮೋನಿನ ಬದಲಾವಣೆ, ಮೊಡವೆಗಳಂತಹ ಸಮಸ್ಯೆಗಳು ಮತ್ತು ಬೆಳ್ಳಗೆ, ಆಕರ್ಷಕ ಮತ್ತು ಸೊಗಸಾಗಿ ಕಾಣುವುದು, ಪರೀಕ್ಷೆ ಆತಂಕ ಇತ್ಯಾದಿ ವಿಷಯಗಳ ಮೇಲೆ ಅವರು ಬೆಳಕು ಚೆಲ್ಲಿದರು.
ಜಿಐಒ ಪ್ರಾದೇಶಿಕ ಸಹಾಯಕ ಸಂಚಾಲಕಿ ಉಸ್ತಾದ್ ನಸೂಹಾ ಫಾತಿಮ ‘ಪರೀಕ್ಷೆಯನ್ನು ಎದುರಿಸುವುದು ಹೇಗೆ’ ಎಂಬ ವಿಷಯದ ಕುರಿತು ಮಾತನಾ ಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯೋ ಪಾಧ್ಯಾಯಿನಿ ಶ್ವೇತಾ ಶೆಟ್ಟಿ ಉಪಸ್ಥಿತರಿದ್ದರು. ಜಿಐಓ ಮಲ್ಪೆ ಸ್ಥಾನೀಯ ಅಧ್ಯಕ್ಷೆ ಮಿಸ್ಬಾಹ್ ಫಿರ್ದೌಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.







