ಕೋಮುಗಲಭೆ ನಿಗ್ರಹಿಸುವಲ್ಲಿ ಆಡಳಿತಶಾಹಿ ವಿಫಲ: ಡಾ. ಇಂದಿರಾ ಹೆಗ್ಡೆ
‘ಬಹುಮುಖಿ ಭಾಷಾ ಸಾಹಿತ್ಯೋತ್ಸವ’ಕ್ಕೆ ಚಾಲನೆ
ಮಂಗಳೂರು, ಫೆ.24: ಜೈನರು, ಶೈವರು, ವೈಷ್ಣವರ ನಡುವೆಯೂ ಹಿಂದೆ ಗಲಭೆಗಳು ನಡೆಯುತ್ತಿತ್ತು. ಆ ಕಾಲದ ರಾಜರು ಅವುಗಳನ್ನು ಸಮರ್ಥವಾಗಿ ನಿಯಂತ್ರಿಸುತ್ತಿದ್ದರು. ಆದರೆ ಇಂದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮೀಯರ ನಡುವೆ ನಡೆಯುವ ಗಲಭೆಗಳನ್ನು ನಿಯಂತ್ರಿಸುವಲ್ಲಿ ಆಡಳಿತಶಾಹಿ ವಿಫಲವಾಗಿದೆ ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಡೆ ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಹಯೋಗದಲ್ಲಿ ತುಳು, ಕೊಂಕಣಿ, ಬ್ಯಾರಿ ಮತ್ತು ಅರೆಭಾಷೆ ಅಕಾಡಮಿಗಳ ವತಿಯಿಂದ ಶನಿವಾರ ನಗರದ ತುಳುಭವನದಲ್ಲಿ ನಡೆದ ‘ಬಹುಮುಖಿ ಭಾಷಾ ಸಾಹಿತ್ಯೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯಲ್ಲಿ ಐದಾರು ಭಾಷೆಗಳಿವೆ. ಆದರೆ ಭಾಷಾ ವಿಚಾರಕ್ಕಾಗಿ, ನೀರಿನ ವಿಚಾರಕ್ಕಾಗಿ ಜಗಳಗಳು ನಡೆದಿಲ್ಲವಾದರೂ ಧರ್ಮಗಳ ವಿಚಾರವಾಗಿ ಗಲಭೆಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಯುವಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಹಿಂದಿನ ರಾಜರುಗಳ ಆಡಳಿತದಂತೆ ರಾಜ್ಯವನ್ನಾಳುವ ಜನಪ್ರತಿನಿಧಿಗಳು ಸಮರ್ಥ ಆಡಳಿತ ನಡೆಸುತ್ತಿದ್ದರೆ ಇಂತಹ ಗಲಭೆಗಳು ನಡೆಯುವುದಿಲ್ಲ ಎಂದ ಇಂದಿರಾ ಹೆಗ್ಡೆ ಕರಾವಳಿಯ ಜನತೆ ಸೌಹಾರ್ದ ಮನಸ್ಸಿನವರಾಗಿದ್ದರಿಂದಲೇ ಇತರ ಧರ್ಮಗಳ ಸೌಹಾರ್ದ ಬದುಕಿನ ಕತೆಗಳು ಇಲ್ಲಿ ಇತಿಹಾಸವಾಗಿವೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ಶಶಿಲೇಖಾ ಬಿ. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಸಾರಾ ಅಬೂಬಕರ್, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರು ಮುಹಮ್ಮದ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪಿ.ಸಿ. ಜಯರಾಮ, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು. ರೂಪಕಲಾ ಆಳ್ವ ಸ್ವಾಗತಿಸಿದರು.
ಕರಾವಳಿ ಬಹುತ್ವದ ಒಡಲು: ಸೌಹಾರ್ದ ದೃಷ್ಟಿ ಎಂಬ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ ಕೆ.ಎ. ರೋಹಿಣಿ, ಡಾ. ವಿಶ್ವನಾಥ ಬದಿಕಾನ, ಡಾ. ಗೀತಾ ಶೆಣೈ, ಬಿ.ಎ. ಮುಹಮ್ಮದ್ ಹನೀಫ್, ಪ್ರೊ. ಹರಿಣಾಕ್ಷಿ ಎಂ.ಡಿ., ವಸಂತಿ ಶೆಟ್ಟಿ ಬ್ರಹ್ಮಾವರ ವಿಚಾರ ಮಂಡಿಸಿದರು.







