ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ: ಮೋದಿ, ಚೋಕ್ಸಿ ಪಾಸ್‌ಪೋರ್ಟ್ ರದ್ದು

ಹೊಸದಿಲ್ಲಿ, ಫೆ. 24: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 11,400 ಕೋ. ರೂ. ವಂಚಿಸಿದ ಆರೋಪಕ್ಕೆ ಒಳಗಾಗಿರುವ ವಜ್ರೋದ್ಯಮಿ ನೀರವ್ ಮೋದಿ ಹಾಗೂ ಅವರ ಉದ್ಯಮ ಪಾಲುದಾರ ಮೆಹುಲ್ ಚೋಕ್ಸಿಯ ಪಾಸ್ ಪೋರ್ಟ್ ಅನ್ನು ಸರಕಾರ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಫೆಬ್ರವರಿ 16ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇವರಿಬ್ಬರ ಪಾಸ್‌ಪೋರ್ಟ್ ಅನ್ನು ನಾಲ್ಕು ವಾರಗಳ ಕಾಲ ರದ್ದುಗೊಳಿಸಿತ್ತು. ಜಾರಿ ನಿರ್ದೇಶನಾಲಯದ ಸಲಹೆಯಂತೆ ಪಾಸ್‌ಪೋರ್ಟ್ ನೀಡುವ ವಿದೇಶಾಂಗ ವ್ಯವಹಾರಗಳ ಪ್ರಾಧಿಕಾರ ಕೂಡಲೇ ಜಾರಿಗೆ ಬರುವಂತೆ ನಾಲ್ಕು ವಾರಗಳ ಕಾಲ ನೀರವ್ ದೀಪಕ್ ಮೋದಿ ಹಾಗೂ ಮೆಹುಲ್ ಚಿನುಭಾ ಚೋಕ್ಸಿ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಸಲಯದ ಪತ್ರಿಕಾ ಹೇಳಿಕೆ ತಿಳಿಸಿದೆ.
ಎರಡು ದಿನಗಳ ಹಿಂದೆ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗೆ ರವಾನಿಸಿದ ಇಮೇಲ್‌ನಲ್ಲಿ ನೀರವ್ ಮೋದಿ, ತನ್ನ ಪಾಸ್‌ಪೋರ್ಟ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದು ಹಾಗೂ ವಿದೇಶದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು ಬಾಕಿ ಇರುವುದರಿಂದ ತನಿಖಾ ಸಂಸ್ಥೆ ಮುಂದೆ ಹಾಜರಾಗಲು ಸಾಧ್ಯಾವಾಗಿಲ್ಲ ಎಂದಿದ್ದಾರೆ.
ಈಗ ಜಾರಿ ನಿರ್ದೇಶನಾಲಯ ನೀರವ್ ಮೋದಿಗೆ ಹೊಸ ಸಮನ್ಸ್ ಜಾರಿ ಮಾಡಿದೆ. ಹಣ ವಂಚನೆ ಕಾಯ್ದೆ ಅಡಿಯಲ್ಲಿ ನೀರವ್ ಮೋದಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್‌ಗೆ ವಂಚಿಸಲಾಗಿದೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಂಚನೆ ಬೆಳಕಿಗೆ ಬಂದ ಅನಂತರ ಸಿಬಿಐ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಮೋದಿ, ಚೋಕ್ಸಿ ಹಾಗೂ ಇತರರ ಕುರಿತು ತನಿಖೆ ನಡೆಸುತ್ತಿವೆ.
ಈ ನಡುವೆ ಸರಕಾರದ ಕ್ರಮವನ್ನು ನೀರವ್ ಮೋದಿ ಅವರ ವಕೀಲ ವಿಜಯ್ ಅಗರ್‌ವಾಲ್ ಟೀಕಿಸಿದ್ದಾರೆ.
ತನ್ನ ಕಕ್ಷಿದಾರನ ವಿರುದ್ಧ ಪ್ರಥಮ ಮಾಹಿತಿ ವರದಿ ಮಾತ್ರ ದಾಖಲಿಸಲಾಗಿದೆ. ಇದುವರೆಗೆ ಯಾವುದೇ ವಿಚಾರಣೆ ಆರಂಭಿಸಿಲ್ಲ. ಆದರೂ ಇಂತಹ ಸಂದರ್ಭ ನ್ಯಾಯಾಲಯದ ತೀರ್ಪು ಹಾಗೂ ಮಾರ್ಗದರ್ಶನ ಉಲ್ಲಂಘಿಸಿ ಪಾಸ್‌ಪೋರ್ಟ್ ರದ್ದುಗೊಳಿಸಲಾಗಿದೆ ಎಂದು ವಿಜಯ್ ಅಗರ್‌ವಾಲ್ ಹೇಳಿದ್ದಾರೆ.







