ಹಸಿವು ಮುಕ್ತ ಕರ್ನಾಟಕ ದೇಶಕ್ಕೆ ಮಾದರಿ-ಆಸ್ಕರ್ ಫೆರ್ನಾಂಡೀಸ್
ಮಂಗಳೂರು, ಫೆ. 24: ಹಸಿವು ಮುಕ್ತ ಕರ್ನಾಟಕ ದೇಶಕ್ಕೆ ಮಾದರಿಯಾದ ಕಾರ್ಯಕ್ರಮ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ನಗರ ಆಶ್ರಯ ಸಮಿತಿ ಆಶ್ರಯದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಿರ್ಮಿಸಲಾದ ‘ ಜಿ ಪ್ಲಸ್ 3 ’ಮಾದರಿಯ ವಸತಿ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮವನ್ನು ನಗರದ ಕುಲಶೇಖರ ಕೊರ್ಡೆಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ನೆರವೇರಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎನ್ನುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಂಡ ರೀತಿಯ ಕಾರ್ಯಕ್ರಮ ದೇಶದ ಬೇರೆ ಕಡೆ ಇಲ್ಲ .ಅದೊಂದು ಮಾದರಿ ಕಾರ್ಯಕ್ರಮವಾಗಿದೆ.ದೇಶಕ್ಕೆ ಸ್ವಾತಂತ್ರ ದೊರೆತಾಗ ಭಾರತದಲ್ಲಿ ಸರಾಸರಿ ಜೀವತಾವಧಿ 38 ವರ್ಷ ಇತ್ತು ಈಗ ದೇಶದ ಜನರ ಜೀವಿತಾವಧಿ 68ರಿಂದ ಸುಮಾರು 70ವರ್ಷಕ್ಕೆ ಏರಿಕೆಯಾಗಿದೆ. ಇದು ಈ ದೇಶದ ಸಾಧನೆ .ಸ್ವಾತಂತ್ರ ದೊರೆತರೂ ಇನ್ನೂ ಸ್ವಂತ ಮನೆ ಇಲ್ಲದ ಜನರು ದೊಡ್ಡ ಸಂಖ್ಯೆಯಲ್ಲಿರುವುದು ಈ ದೇಶದಲ್ಲಿರುವುದರಿಂದ ನಾವು ಪಡೆದ ಸ್ವಾತಂತ್ರದ ಅರ್ಥ ಹೀನವಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಇಲ್ಲದ ಜನರಿಗೆ ಮನೆ ಕಟ್ಟಲು ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಜನರ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ ಗುಬ್ಬಚ್ಚಿಗೂ ಒಂದು ಗೂಡು ಬೇಕು ಎಂಬ ಆಸೆ ಇರುತ್ತದೆ.ಆದುದರಿಂದ ಮನುಷ್ಯರಿಗೆ ಸಹಜವಾಗಿ ಈ ಆಸೆ ಈಡೇರಿಸಲು ಸರಕಾರ ನೆರವಾಗಬೇಕಾಗಿದೆ ಈ ನಿಟ್ಟಿನಲ್ಲಿ ಎಂದು ಆಸ್ಕರ್ ಫೆರ್ನಾಂಡೀಸ್ ಶಾಸಕ ಜಿ.ಆರ್.ಲೋಬೊ ವಹಿಸಿಕೊಂಡಿರುವ ಮುತುವರ್ಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಎಲ್ಲರಿಗೂ ಮನೆ ಒದಗಿಸಿ ಕೊಡುವುದು ನನ್ನ ಆಶಯ:- ನನ್ನ ಕ್ಷೇತ್ರದಲ್ಲಿ ಮನೆ ಇಲ್ಲದ ಎಲ್ಲಾ ಬಡವರಿಗೆ ಮನೆ ಒದಗಿಸಿಕೊಡಬೇಕು ಎನ್ನುವುದು ನನ್ನ ಬಹುದಿನ ಆಶಯವಾಗಿತ್ತು.ಈ ಹಿಂದೆ ಮನಪಾ ಅಧಿಕಾರಿಯಾಗಿರುವಾಗಲೂ ಶಕ್ತಿನಗರದ ರಾಜೀವ್ ಕಾಲನಿಯಲ್ಲಿ ಬಡವರಿಗೆ ನಿವೇಶನ ನೀಡುವ ಕೆಲಸ ಮಾಡಿದ್ದೇನೆ. ಕಳೆದ ಮೂರು ವರ್ಷದಿಂದ ಶಕ್ತಿನಗರದಲ್ಲಿ 930 ಮನೆಗಳ ವಸತಿ ಸಂಕೀರ್ಣವನ್ನು ನಿರ್ಮಿಸಲು ಪ್ರಯತ್ನಿಸಿದ ಫಲವಾಗಿ ಇಂದು ಶಿಲಾನ್ಯಾಸ ನೆರವೇರಲು ಸಾಧ್ಯವಾಗಿದೆ. ಜಿ ಪ್ಲಸ್ 3 ಮಾದರಿಯ ಪ್ಲಾಟ್ ನಿರ್ಮಿಸುವ ಈ ಯೋಜನೆಗೆ ಸುಮಾರು 80 ಕೋಟಿ ವೆಚ್ಚವಾಗಬಹುದು ಮೂಲ ಭೂತ ಸೌಕರ್ಯಗಳಿಗಾಗಿ 15 ಕೋಟಿ ರೂ ವೆಚ್ಚ ಮಾಡಲಾಗುವುದು.18 ತಿಂಗಳೊಳಗೆ ವಸತಿ ಸಮುಚ್ಛಯ ಪೂರ್ಣಗೊಳಿಸ ಲಾಗುವುದು. ಇನ್ನೂ ಮನೆ ಇಲ್ಲದವರ ಅರ್ಜಿ ಇದೆ.ಮುಂದಿನ ಹಂತದಲ್ಲಿ ಇನ್ನೂ ಮೂರು ಸಾವಿರ ಜನರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ ಹಮ್ಮಿಕೊಳ್ಳುವ ಗುರಿ ಇದೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.
ನಾವು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯದೆ,ರಕ್ತಹರಿಸುವ ಕೆಲಸದಲ್ಲಿ ತೊಡಗದೆ ಎಲ್ಲಾ ಜನರು ಒಂದು ಕಡೆ ಒಂದೇ ತಾಯಿಯ ಮಕ್ಕಳಂತೆ ಒಟ್ಟಾಗಿ ಬಾಳುವಂತಾಗ ಬೇಕು ಎನ್ನುವ ಆಶಯದೊಂದಿಗೆ ಈ ವಸತಿ ಸಮುಚ್ಛಯ ಯೋಜನೆ ಕಾರ್ಯಗತವಾಗ ಬೇಕು ಎನ್ನುವಗುರಿ ಇದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಸಮಾರಂಭದಲ್ಲಿ ಮನಪಾ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಸದಸ್ಯರಾದ ಶಶಿಧರ್, ಭಾಸ್ಕರ,ನವೀನ್ ಡಿ ಸೋಜ, ಅಬ್ದುಲ್ ರವೂಫ್, ಜುಬೇದ, ನಾಗವೇಣಿ, ಸಬೀತಾ ಮಿಸ್ಕಿತ್, ಪ್ರವೀಣ್ ಚಂದ್ರ ಆಳ್ವ, ವಿವಿಧ ಧರ್ಮಗಳ ಧರ್ಮಗುರುಗಳಾದ ವಂ, ವಿಕ್ಟರ್ ಮಚಾದೋ, ಅಬ್ದುಲ್ ರಹ್‌ಮಾನಿಯಾ, ರಾಘ ವೇಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮನಪಾ ಉಪ ಆಯುಕ್ತ ಗೋಕುಲದಾಸ್ ನಾಯಕ್ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಆಯ್ಕೆಯಾದ ಫಲಾನುಗಳಿಗೆ ವಸತಿಯೋಜನೆಯ ಪ್ರಮಾಣ ಪತ್ರವನ್ನು ಅತಿಥಿಗಳ ಮೂಲಕ ವಿತರಿಸಲಾಯಿತು.







