ಶಿವಮೊಗ್ಗ: ಗೋಹತ್ಯೆ ನಿಷೇಧ, ತ್ರಿವಳಿ ತಲಾಖ್ ಕಾಯ್ದೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ

ಶಿವಮೊಗ್ಗ, ಫೆ. 24: ಗೋಹತ್ಯೆ ನಿಷೇಧ ಹಾಗೂ ತ್ರಿವಳಿ ತಲಾಖ್ ಕಾಯ್ದೆ ಜಾರಿಗೆ ತರಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಸಂಘಟನೆಯು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರು ಹಾಗೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಲವು ನೀತಿ-ನಿಯಮ ಜಾರಿಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗೋ ಮಾಂಸ ಸೇವನೆ ನಿಷೇಧ ಕಾಯ್ದೆ, ತ್ರಿವಳಿ ತಲಾಖ್‍ನಂತಹ ಕಾಯ್ದೆಗಳು ಸಾಕ್ಷಿಯಾಗಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮುಸ್ಲಿಂ ಹೆಣ್ಣು ಮಕ್ಕಳಿಗೆ ನ್ಯಾಯ ಕಲ್ಪಿಸುವ ಉದ್ದೇಶದಿಂದ ತ್ರಿವಳಿ ತಲಾಖ್ ಕಾಯ್ದೆ ಜಾರಿಗೊಳಿಸುತ್ತಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಿರುವುದು ಹಸಿ ಸುಳ್ಳಾಗಿದೆ. ಇದರಲ್ಲಿ ರಾಜಕೀಯ ಹಿತಾಸಕ್ತಿ ಅಡಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪ್ರತಿಭಟನಾಕಾರರು ಆಪಾದನೆ ಮಾಡಿದ್ದಾರೆ.
ತ್ರಿವಳಿ ತಲಾಖ್ ವಿಚಾರವು, ಶರೀಅತ್ ಕಾನೂನು ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನು ವಿಚಾರವಾಗಿದೆ. ಯಾವುದೇ ಧರ್ಮದ ವೈಯಕ್ತಿಕ ಕಾನೂನಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಉದ್ದೇಶಿತ ಮಸೂದೆಯಲ್ಲಿ ತಲಾಖ್ ನೀಡಿದ ವ್ಯಕ್ತಿಗೆ ಮೂರು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸುವ ಪ್ರಸ್ತಾಪವಿದೆ. ಗಂಡ ಜೈಲಿಗೆ ಹೋದರೆ ಆ ಮಹಿಳೆಯ ರಕ್ಷಣೆ ಹಾಗೂ ಜೀವಾನಾಂಶ, ಕುಟುಂಬದ ನಿರ್ವಹಣೆ ಮತ್ತು ಭವಿಷ್ಯದ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪವಿಲ್ಲ. ಮುಸ್ಲಿಂ ಸಮೂಹ ಹಾಗೂ ಶರಿಅತ್ ಕಾನೂನಿಗೆ ವಿರುದ್ದವಾಗಿ ತ್ರಿವಳಿ ತಲಾಖ್ ಮಸೂದೆ ಜಾರಿಗೆ ತರಲು ಹೊರಟಿರುವ ಸರ್ಕಾರದ ಕ್ರಮ ಕಾನೂನುಬಾಹಿರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







