ಮಂಡ್ಯ: ರೈತ ನಾಯಕ ಪುಟ್ಟಣ್ಣಯ್ಯಗೆ ಆಟೋ ಚಾಲಕರ ಶ್ರದ್ಧಾಂಜಲಿ

ಮಂಡ್ಯ, ಫೆ.24: ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಆಟೋ ಚಾಲಕರ ಘಟಕದಿಂದ ನಗರದ ಮಹಾವೀರ ವೃತ್ತದ ಆಟೋ ನಿಲ್ದಾಣದಲ್ಲಿ ಶನಿವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಆಟೋ ಚಾಲಕರು ಮತ್ತು ವಿವಿಧ ಹಿಂದುಳಿದ ಸಮಾಜದ ಮುಖಂಡರು ಮೌನಾಚರಣೆ ಮೂಲಕ ಪುಟ್ಟಣ್ಣಯ್ಯ ನಿಧನಕ್ಕೆ ಶಾಂತಿ ಕೋರಿದರು. ನಂತರ ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಶ್ರಮ ಮತ್ತು ಜ್ಞಾನಕ್ಕೆ ಸಮಾನ ಆದ್ಯತೆ ನೀಡಬೇಕೆಂಬುದು ಪುಟ್ಟಣ್ಣಯ್ಯ ಅವರ ಪ್ರತಿಪಾದನೆಯಾಗಿತ್ತು. ದುಡಿಯುವ ವರ್ಗವನ್ನು ಗೌರವದಿಂದ ಕಾಣುವುದರ ಜೊತೆಗೆ ಶ್ರಮಕ್ಕೆ ತಕ್ಕ ಫಲ ನೀಡಬೇಕೆಂಬ ಹೋರಾಟವನ್ನು ಹೊಂದಿದ್ದ ಅವರು, ದುಡಿಯುವ ವರ್ಗದ ನಾಯಕರಾದ್ದರು ಎಂದರು.
ಪುಟ್ಟಣ್ಣಯ್ಯ ಅವರ ಅಗಲಿಕೆ ರೈತಪರ, ಜನಪರ ಮತ್ತು ಪ್ರಗತಿಪರ ಚಳವಳಿಯ ಹಿನ್ನಡೆಯಾಗಿದೆ. ಇದನ್ನು ಭರಿಸಲು ಎಲ್ಲ ವರ್ಗದವರೂ ಪುಟ್ಟಣ್ಣಯ್ಯ ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ಚಳವಳಿಗಳನ್ನು ಮುನ್ನಡೆಸಬೇಕು. ಆ ಮೂಲಕ ಪುಟ್ಟಣ್ಣಯ್ಯ ಅವರನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಆಟೋ ಚಾಲಕರ ಘಟಕ ಕಾರ್ಯದರ್ಶಿ ಹೊಸಹಳ್ಳಿ ಶಿವಕುಮಾರ್, ರೈತ ಮುಖಂಡ ಹನಿಯಂಬಾಡಿ ನಾಗರಾಜು, ಹಿಂದುಳಿದ ಸಮಾಜದ ಮುಖಂಡರಾದ ಎಚ್.ಪಿ. ಸತೀಶ್, ಸಿ. ಸಿದ್ದಶೆಟ್ಟಿ, ಹನುಮಂತಯ್ಯ, ಬಸವರಾಜು, ಕಲಾವಿದ ಪ್ರಕಾಶ್, ಅಲ್ಪಸಂಖ್ಯಾತ ಮುಖಂಡರಾದ ಮುಹಮದ್ ಘನೀಖಾನ್, ಅತೀಕ್ ಅಹಮದ್, ಆಟೋ ಕೃಷ್ಣ, ಶಂಕರ್, ಮಹದೇವು ಇತರರು ಹಾಜರಿದ್ದರು.







