ಮಡಿಕೇರಿ: ರ‍್ಯಾಫ್ಟಿಂಗ್ ಮೇಲೆ ಹಿಡಿತ ಸಾಧಿಸಲು ಉದ್ಯಮಿಗಳ ಹುನ್ನಾರ; ಚಿದಾನಂದ ಆರೋಪ

ಮಡಿಕೇರಿ ಫೆ.24: ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ರ್ಯಾಫ್ಟಿಂಗ್‍ನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಕೆಲವು ವಿಕೃತ ಮನೋಭಾವದ ಉದ್ಯಮಿಗಳು ಕುತಂತ್ರ ನಡೆಸುತ್ತಿದ್ದು, ರ್ಯಾಫ್ಟಿಂಗ್ ಕೇಂದ್ರಗಳನ್ನು ಟೆಂಡರ್ ಮೂಲಕ ನೀಡಿದಲ್ಲಿ ಸ್ಥಳೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ರ್ಯಾಫ್ಟಿಂಗ್ ಕೇಂದ್ರದ ಮಾಲೀಕರೂ ಆಗಿರುವ ಗುಡ್ಡೆಹೊಸೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ಚಿದಾನಂದ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿಗಳು ಮಾತ್ರ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆಯಿಂದ ಯುವ ಸಮೂಹ ಬೀದಿ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ದುಬಾರೆಯಲ್ಲಿ ಪ್ರವಾಸಿಗನೊಬ್ಬನ ಮೇಲೆ ನಡೆದ ಹಲ್ಲೆ ಪ್ರಕರಣದ ಬಳಿಕ ಕಳೆದ ಎರಡು ವಾರಗಳಿಂದ ರ್ಯಾಫ್ಟಿಂಗ್ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದೆ. ಇದರ ಹಿಂದೆ ಈ ಉದ್ಯಮವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಕೊಡಗು ಇಂದು ಪ್ರವಾಸೋದ್ಯಮದಲ್ಲಿ ವಿಶ್ವ ಪ್ರಸಿದ್ಧಿ ಪಡೆಯಲು ರ್ಯಾಫ್ಟಿಂಗ್ ಕೂಡಾ ಕಾರಣವಾಗಿದೆ. ರ್ಯಾಫ್ಟಿಂಗ್ ನಡೆಸುವವರು ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆದು ಅದನ್ನು ನಡೆಸುತ್ತಿದ್ದು, ಎಲ್ಲಾ ರ್ಯಾಫ್ಟಿಂಗ್ ಕೇಂದ್ರಗಳು ಪಬ್ಲಿಕ್ ಲಯಬಿಲಿಟಿ ಇನ್ಸೂರೆನ್ಸ್‍ನಿಂದ ರಕ್ಷಿಸಲ್ಪಟ್ಟಿವೆ. ಅಲ್ಲದೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಸುಮಾರು 900ರಿಂದ 1000 ಕುಟುಂಬಗಳಿಗೆ ಉದ್ಯೋಗವನ್ನೂ ನೀಡಿವೆ ಎಂದು ಚಿದಾನಂದ ತಿಳಿಸಿದರು.
ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸರಕಾರಗಳು ಇಂದು ಹಲವಾರು ಯೋಜನೆಗಳಡಿ ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡುತ್ತಿವೆ. ಆದರೆ ಇದರ ಯಾವುದೇ ಪ್ರಯೋಜನವನ್ನು ಪಡೆಯದೆ ರ್ಯಾಫ್ಟಿಂಗ್ ಕೇಂದ್ರಗಳು ತಮ್ಮ ಉಳಿತಾಯದಲ್ಲಿ ಉದ್ಯೋಗವನ್ನು ಸೃಷ್ಟಿಸಿದ್ದು, ಉದ್ಯೋಗ ಪಡೆದವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಇತರ ವರ್ಗದವರೂ ಇದ್ದಾರೆ ಎಂದು ಹೇಳಿದರು.
ಇಂತಹ ಒಂದು ಉದ್ಯಮವನ್ನು ಇಂದು ಕೆಲವು ವಿಕೃತ ಮನೋಭಾವದ ಉದ್ಯಮಗಳು ತಮ್ಮ ತೆಕ್ಕೆಗೆ ಪಡೆಯುವ ಹುನ್ನಾರವನ್ನು ನಡೆಸುತ್ತಿದ್ದು, ರ್ಯಾಫ್ಟಿಂಗ್ ಕೇಂದ್ರಗಳನ್ನು ಟೆಂಡರ್ ಮೂಲಕ ನೀಡಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿವೆ. ಸಾವಿನಲ್ಲೂ ವ್ಯಾಪಾರ ನಡೆಸುವ ನೀಚ ಸ್ಥಿತಿಗೆ ಉದ್ಯಮಿಗಳು ತಲುಪುತ್ತಿರುವುದು ಕೊಡಗಿನ ಘನತೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಸತ್ಯಾಂಶಗಳನ್ನು ಪರಿಶೀಲಿಸಿ, ಉದ್ಯಮಿಗಳಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವುದನ್ನು ತಡೆಯಬೇಕಿದೆ ಎಂದರು.
ರ್ಯಾಫ್ಟಿಂಗ್ ಕೇಂದ್ರಗಳಲ್ಲಿ ನೈರ್ಮಲ್ಯ ಕಾಪಾಡುವುದು ಆಯಾ ಕೇಂದ್ರದ ಮಾಲೀಕರ ಆದ್ಯ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದ ಚಿದಾನಂದ, ದುಬಾರೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಗಣಪತಿ, ವಿನೋದ್ ಸಿದ್ದಯ್ಯ, ರಾಮು ಹಾಗೂ ಉಮೇಶ್ ಉಪಸ್ಥಿತರಿದ್ದರು.







