ಹರ್ಯಾಣ: ಶಾಲೆಗಳಲ್ಲಿ ‘ಗಾಯತ್ರಿ ಮಂತ್ರ’ ಕಡ್ಡಾಯಕ್ಕೆ ನಿರ್ಧಾರ
ಸಾಂದರ್ಭಿಕ ಚಿತ್ರ
ಚಂಡಿಗಢ, ಫೆ. 25: ಹರ್ಯಾಣದ ಬಿಜೆಪಿ ಸರಕಾರ ರಾಜ್ಯಾದ್ಯಂತದ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭ ‘ಗಾಯತ್ರಿ ಮಂತ್ರ’ ಪಠಿಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಶುಕ್ರವಾರ ನಡೆದ ಶಾಲಾ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಪಾಲುದಾರರ ಸಭೆ ಬಳಿಕ ರಾಜ್ಯ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಸರಕಾರ ಬುಧವಾರ ಅಧಿಸೂಚನೆ ಹೊರಡಿಸಲಿದೆ (ಫೆಬ್ರವರಿ 27) ಎಂದು ಶರ್ಮಾ ಹೇಳಿದ್ದಾರೆ.
ಸರಕಾರ ರಚನೆಯಾದ ಕೂಡಲೇ ಶಾಲಾ ಪಠ್ಯದಲ್ಲಿ ಗೀತಾ ಶ್ಲೋಕ ಸೇರಿಸಲಾಯಿತು. ಇದರಿಂದ ಸಕಾರಾತ್ಮಕ ಫಲಿತಾಂಶ ದೊರಕಿತು ಎಂದು ಶರ್ಮಾ ಹೇಳಿದ್ದಾರೆ. ಇದು ಶಿಕ್ಷಣದ ಕೇಸರೀಕರಣವೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘‘ಸೂರ್ಯನ ಮೊದಲ ಕಿರಣ ಕೇಸರಿ ಹಾಗೂ ಧ್ವಜದ ಮೊದಲ ಬಣ್ಣ ಕೇಸರಿ. ಕೇಸರಿ ಬಗ್ಗೆ ತಪ್ಪು ಕಲ್ಪನೆ ಯಾಕೆ ? ನಮಗೆ ಕೇಸರಿ ಬಣ್ಣದ ಬಗ್ಗೆ ಅಲರ್ಜಿ ಇಲ್ಲ’’ ಎಂದರು.
ಗಾಯತ್ರಿ ಮಂತ್ರ ಯಾವುದೇ ಧರ್ಮದ್ದಲ್ಲ. ಎಲ್ಲಾ ದಿಶೆಯಿಂದ, ಎಲ್ಲಾ ಉತ್ತಮ ಮೌಲ್ಯಗಳನ್ನು ಸ್ವೀಕರಿಸಲು ಸಾಧ್ಯವಾಗುವಂತೆ ದೇವರನ್ನು ಆಗ್ರಹಿಸುವ ಪ್ರಾರ್ಥನೆ ಇದು. ಇದರಲ್ಲಿ ಯಾರಿಗಾದರೂ ಏನಾದರೂ ತೊಂದರೆ ಇದೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಅವರು ಹೇಳಿದರು.