ನಾಡುನುಡಿ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು: ಬೆಸಗಹರಳ್ಳಿ ಎಲ್ಲೇಗೌಡ
ಮದ್ದೂರು: ತಾಲೂಕು 7ನೆ ಸಾಹಿತ್ಯ ಸಮ್ಮೇಳನ

ಮದ್ದೂರು, ಫೆ.25: ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರ ಗೌರವ ಬೆಳೆಸಿಕೊಳ್ಳಬೇಕು ಎಂದು ಮದ್ದೂರು ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬೆಸಗರಹಳ್ಳಿ ಎಲ್ಲೇಗೌಡ ಕರೆ ನೀಡಿದ್ದಾರೆ.
ತಾಲ್ಲೂಕಿನ ಬೆಸಗರಹಳ್ಳಿ ಗ್ರಾಮದ ತಾಯಮ್ಮ ಚನ್ನೇಗೌಡ ವಿದ್ಯಾಸಂಸ್ಥೆಯ ಆವರಣದಲ್ಲಿ ರವಿವಾರ ನಡೆದ ಸಮ್ಮೇಳನದಲ್ಲಿ ಅವರು ಭಾಷಣ ಮಾಡಿದರು.
ಕನ್ನಡ ಚಳವಳಿಯ ಹಳದಿ ಕೆಂಪಿನ ಧ್ವಜವನ್ನು ರೂಪಿಸಿದವರು ಮದ್ದೂರಿನ ಮ. ರಾಮಮೂರ್ತಿ ಹಾಗೂ ಸಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂಬ ಉದ್ಘೋಷವನ್ನು ನೀಡಿದ್ದು ನಾಗಮಂಗಲ ತಾಲೂಕಿನ ಬಿ.ಎಂ.ಶ್ರೀ. ಎಂದು ಹೇಳಿಕೊಳ್ಳುವುಕ್ಕೆ ಹೆಮ್ಮೆ ಅನಿಸುತ್ತದೆ ಎಂದರು.
ಬೆಸಗರಹಳ್ಳಿಯ ಮಣ್ಣು ಅನೇಕ ಸಾಹಿತಿ, ಸಿನಿಮಾ ನಟರು, ಕಲಾವಿದರನ್ನು ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಜತೆಗೆ ತಾಲೂಕಿನ ಹಲವಾರು ಸಾಹಿತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಉನ್ನತ ಆಶಯಗಳೊಂದಿಗೆ ರೂಪುಗೊಂಡ ಸಂಸ್ಥೆ ವಾರ್ಷಿಕ ಸಮ್ಮೇಳನಗಳನ್ನಷ್ಟೆ ಮಾಡಿಕೊಂಡು ಸಾಹಿತ್ಯ ಚಟುವಟಿಕೆ ನಡೆಸುತ್ತಿದ್ದ ಕಾಲವಾಗಿತ್ತು. ನಾಡೋಜ ದೇಶಹಳ್ಳಿ ಜಿ.ನಾರಾಯಣ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಜಿಲ್ಲಾ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದು ಸಾಹಿತ್ಯ ಶಿಕ್ಷಣದ ಒಲವುಳ್ಳವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಗಳು ಜರುಗುವಂತೆ ಮಾಡಿದ್ದು ಚರಿತ್ರೆ ಎಂದು ಅವರು ಸ್ಮರಿಸಿದರು.
ಬಸವ ಜಯಂತಿ ಕಾರ್ಯಕ್ರಮಗಳು ಇಡಿ ದಕ್ಷಿಣ ಕರ್ನಟಕದಲ್ಲಿ ಎಲ್ಲೂ ನಡೆಯದೆ ಇದ್ದ ಕಾಲದಲ್ಲಿ ಬೆಸಗರಹಳ್ಳಿ ಬಸವ ಜಯಂತಿಯು ಪ್ರಸಿದ್ದವಾಗಿತ್ತು. ನಾಡಿನ ಪ್ರಸಿದ್ದ ಪ್ರವಚನಕಾರರು, ಸಾಹಿತಿಗಳು, ಹೆಸರಾಂತ ಕಥಾಕಾಲಕ್ಷೇಪದ ಮಹನೀಯರೆಲ್ಲರು ಬರುತ್ತಿದ್ದರು. ಅಂತೆಯೇ ನಾಟಕಕರಾದ ಪುಟ್ಟಸ್ವಾಮಯ್ಯ, ಹೊನ್ನಪ್ಪ, ಜೀರಿಗೆ ಕಟ್ಟಿಬಸಪ್ಪ, ಅರುಣ್‍ಕುಮಾರ್, ಶೀಲಾನಾಯ್ಡು, ಬೇಲೂರು ಸಹೋದರಿಯರು, ಬಾಳಪ್ಪ ಹುಕ್ಕೇರಿ ಮುಂತಾದ ಪ್ರಸಿದ್ದರನ್ನು ಕಂಡಿದ್ದು ಬೆಸಗರಹಳ್ಳಿಯಲ್ಲೆ ಎಂದು ಬೆಸಗರಹಳ್ಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಬೆಸಗರಹಳ್ಳಿಯಲ್ಲಿ ಹುಟ್ಟಿದ ಜನ, ಮದ್ದೂರು ತಾಲೂಕಿನ ಜನ ಮಾತ್ರವಲ್ಲ, ಮಂಡ್ಯ ಜಿಲ್ಲೆಯ ಜನ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಹೃದಯವಂತ ಜನ ಎಂದು ಅವರು ಶ್ಲಾಘಿಸಿದರು.
ಜ್ಞಾನ ಅತ್ಯಂತ ಪ್ರಭಾವಶಾಲಿ ಸಾಧನ: ಪ್ರೊ.ಎಂ.ಕೃಷ್ಣೇಗೌಡ
ಸಮ್ಮೇಳನ ಉದ್ಘಾಟಿಸಿದ ಚಿಂತಕ ಪ್ರೊ.ಎಂ.ಕೃಷ್ಣೇಗೌಡ, ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಸಾಧನವೆಂದರೆ ಅದು ಜ್ಞಾನ ಮಾತ್ರ. ನಮ್ಮ ಜನರು ಇದನ್ನು ಬಿಟ್ಟು ಬೇರೆಯದಕ್ಕೆ ಹವಣಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ವಿಷಾದಿಸಿದರು. ಜಗತ್ತಿನ ಬಹುತೇಕ ದೇಶಗಳು ಜ್ಞಾನ ಮತ್ತು ವಿದ್ಯೆಗೆ ಹೆಚ್ಚು ಮಹತ್ವ ನೀಡುತ್ತಿದ್ದರೆ, ನಮ್ಮವರು ಹಣ ಮತ್ತು ಅಧಿಕಾರಕ್ಕೆ ಹಾತೊರೆಯುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ಅವರು ಕಿಡಿಕಾರಿದರು.
ಭಾರತದ ಜನರು ವಿದೇಶಿ ಪಾನೀಯ ಮತ್ತು ಆಹಾರಗಳಿಗೆ ಮಾರುಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಮ್ಮ ದೇಶದ ಜನರ ಆಹಾರ ಮಟ್ಟವನ್ನು ವಿದೇಶಿಗರು ನಿರ್ಧರಿಸುತ್ತಿರುವುದು ಅಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಶದ ಜನರು ಸಾಹಿತ್ಯ, ಸಂಸ್ಕೃತಿ ಹಾಗೂ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಬಗ್ಗೆ ಚಂತನೆ ಮಾಡದೆ ಚುನಾವಣಾ ವಿಷಯವನ್ನೆ ಹೆಚ್ಚಾಗಿ ಪ್ರಸ್ತಾಪ ಮಾಡುವ ಮೂಲಕ ಬದುಕಿನ ಬಗ್ಗೆ ಚಿಂತನೆ ಬೆಳಸಿಕೊಳ್ಳದಿರುವುದು ಆತಂಕವಾಗಿದೆ ಎಂದರು.
ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ ವೇದಿಕೆಯಾಗಿದ್ದು, ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆ, ನೆಲ ಜಲದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಸಮ್ಮೇಳನದ ಅಧ್ಯಕ್ಷರನ್ನು ಗ್ರಾಮದ ಮಾನಸ ವಿದ್ಯಾಸಂಸ್ಥೆಯಿಂದ ಎತ್ತಿನಗಾಡಿಯಲ್ಲಿ ವಿವಿಧ ಜಾಪದ ಕಲಾ ಪ್ರಕಾರಗಳ ಮೂಲಕ ವೇದಿಕೆಗೆ ಕರೆತಂದರು. ಮೆರವಣಿಗೆಗೆ ವಿಧಾನಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಚಾಲನೆ ನೀಡಿದರು. ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ವಿಚಾರ ಮತ್ತು ಕವಿಗೋಷ್ಠಿ ನಡೆದವು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂಧಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಪಣ್ಣೇದೊಡ್ಡಿ ವಿ.ಹರ್ಷ ಪ್ರಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ, ಸುಗುಣ ಎಲ್ಲೇಗೌಡ, ತಾಪಂ ಸದಸ್ಯ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಜಯಮ್ಮ, ಕಸಾಪ ತಾಲೂಕು ಉಪಾಧ್ಯಕ್ಷ ಅಪೂರ್ವಚಂದ್ರ, ಎಂ.ಡಿ.ರಮೇಶ್, ವರ್ತಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕೆ.ಬಿ.ರಾಮಕೃಷ್ಣ, ರಮೇಶ್, ರೇವಣ್ಣ, ಇತರ ಗಣ್ಯರು ಉಪಸ್ಥಿತರಿದ್ದರು.







