ಕ್ಸಿ ಜಿನ್ ಪಿಂಗ್ ಅಧಿಕಾರಾವಧಿ ಮಿತಿ ರದ್ದುಪಡಿಸಲು ಸಿಪಿಸಿ ನಿರ್ಧಾರ

ಬೀಜಿಂಗ್,ಫೆ.25: ಚೀನಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿಯನ್ನು ಸತತ ಎರಡು ಅವಧಿಗಳಿಗೆ ಸೀಮಿತಗೊಳಿಸುವ ನಿಯಮವನ್ನು ರದ್ದುಪಡಿಸುವ ಪ್ರಸ್ತಾಪವನ್ನು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಮಂಡಿಸಿದ್ದು, ಇದರೊಂದಿಗೆ ಹಾಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು 2022ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಹಾದಿ ಸುಗಮವಾಗಲಿದೆ.
ಚೀನಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸತತವಾಗಿ ಎರಡು ಅವಧಿಗಿಂತ ಹೆಚ್ಚು ಬಾರಿ ಸೇವೆಯಲ್ಲಿ ಮುಂದುವರಿಯಲಾಗದು ಎಂಬ ನಿಯಮವನ್ನು ಪಕ್ಷದ ಸಂವಿಧಾನದಿಂದ ತೆಗೆದುಹಾಕುವ ಪ್ರಸ್ತಾಪವನ್ನು ಕಮ್ಯೂನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿ ಮುಂದಿಟ್ಟಿದೆ.
ಚೀನಾ ಕಮ್ಯೂನಿಸ್ಟ್ ಪಕ್ಷ (ಸಿಪಿಸಿ) ಹಾಗೂ ಸೇನೆಯ ವರಿಷ್ಠರೂ ಆಗಿರುವ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಕಳೆದ ವರ್ಷ ತನ್ನ ಎರಡನೆ ಐದು ವರ್ಷಗಳ ಅಧಿಕಾರಾವಧಿಯನ್ನು ಆರಂಭಿಸಿದ್ದರು.
64 ವರ್ಷ ವಯಸ್ಸಿನ ಕ್ಸಿ ಜಿನ್‌ಪಿಂಗ್ 2013ರಲ್ಲಿ ಚೀನಾ ಕಮ್ಯೂನಿಸ್ಟ್ ಪಕ್ಷ ಹಾಗೂ ಚೀನಾದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. 2016ರಲ್ಲಿ ಜಿನ್‌ಪಿಂಗ್ ಅವರಿಗೆ ಸಿಪಿಸಿಯು, ‘‘ಪ್ರಧಾನ’’ ನಾಯಕ ಎಂಬ ಬಿರುದನ್ನು ಪ್ರದಾನಿಸಿತ್ತು.
ಸೋಮವಾರ ನಡೆಯಲಿರುವ ಸಿಪಿಸಿ ಪಕ್ಷದ ಮಹಾಧಿವೇಶನದಲ್ಲಿ, ಕ್ಸಿ ಜಿನ್ ಪಿಂಗ್ ಅವರಿಗೆ ಕಾಲಮಿತಿರಹಿತವಾದ ಅಧಿಕಾರಾವಧಿಯನ್ನು ನೀಡುವ ನಿರ್ಣಯವನ್ನು ಅಂಗೀಕರಿಸುವ ನಿರೀಕ್ಷೆಯಿದೆ.







