ಸೋಮವಾರಪೇಟೆ: 'ವಚನ ಕ್ರಾಂತಿಯ ಪುನರುತ್ಥಾನ' ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಸೋಮವಾರಪೇಟೆ,ಫೆ.25: ಧರ್ಮದ ಸಂಕೋಲೆಯಲ್ಲಿ ಬಂಧಿತರಾಗಿದ್ದ ಜನ ಸಾಮಾನ್ಯರನ್ನು ಮೌಢ್ಯತೆಯ ಸಂಕೋಲೆಯಿಂದ ಹೊರತರಲು ಕ್ರಾಂತಿಯೋಗಿ ಬಸವಣ್ಣನವರು ಅಪಾರವಾಗಿ ಶ್ರಮಿಸಿದರು ಎಂದು ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕೊಡಗು ಪ್ರೆಸ್ ಕ್ಲಬ್ ಹಾಗೂ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ "ವಚನ ಕ್ರಾಂತಿಯ ಪುನರುತ್ಥಾನ' ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಸಮಾರೋಪ ಸಮಾರಂಭದಲ್ಲಿ "ಪ್ರಜಾಧರ್ಮವಾಗಿ ಶರಣಧರ್ಮ' ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಾತಿ, ಧರ್ಮ, ಮೌಢ್ಯತೆಯಿಂದ ನಲುಗಿ ಹೋಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ಬಸವಾದಿ ಶರಣರು ಅಪಾರವಾಗಿ ಶ್ರಮಿಸಿದರು. ಹೀಗಾಗಿ ಸಮಾಜದ ಎಲ್ಲಾ ವರ್ಗಗಳ ನಿಷ್ಠುರವನ್ನು ಕಟ್ಟಿಕೊಳ್ಳಬೇಕಾಯಿತು. ಆದರೆ ಯಾವುದೇ ಸವಾಲುಗಳಿಗೆ ಅಂಜದೆ ಇಡೀ ಜಗತ್ತನ್ನು ಜಂಗಮರಾಗಿ ಕಂಡ ಧೀಮಂತ ವ್ಯಕ್ತಿ ಬಸವಣ್ಣ ಎಂದು ಪ್ರಶಂಸಿದರು.
ಕಾಯಕವೇ ಕೈಲಾಸ, ದಯೆಯಿಲ್ಲದ ಧರ್ಮವಾವುದಯ್ಯ ಎಂಬ ಸಿದ್ದಾಂತವನ್ನು ಕಾಯ, ವಾಚ, ಮನಸಾ ಪಾಲಿಸಿ ಸಮಾಜಕ್ಕೂ ಬೋಧಿಸಿದ ಬಸವಣ್ಣನವರು, ಅನುಭವಮಂಟಪವನ್ನು ಆರಂಭಿಸುವ ಮೂಲಕ ಇಡೀ ವಿಶ್ವವೇ ಮೆಚ್ಚುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 900 ವರ್ಷಗಳಿಗಿಂತ ಮುಂಚೆಯೇ ನೀಡಿದರು. ಅಲ್ಲದೇ ಮಹಿಳೆಯರಿಗೆ ಶೇ.100ರಷ್ಟು ಮುಕ್ತ ಸ್ವಾತಂತ್ರ್ಯವನ್ನು ನೀಡುವ ಮೂಲಕ ಮಾದರಿಯಾದರು. ಈ ದೇಶದಲ್ಲಿ ಹಿಂದುಳಿದ ವರ್ಗಗಳಿಂದ ಬಂದ ವ್ಯಕ್ತಿ ಪ್ರಧಾನಿಯಾಗಿದ್ದರೆ ಹಾಗೂ ಓರ್ವ ದಲಿತ ಕುಟುಂಬದಿಂದ ವ್ಯಕ್ತಿ ರಾಷ್ಟ್ರಪತಿಗಳಾಗಿದ್ದರೆ, ಅದಕ್ಕೆ ಬಸವಾದಿ ಶರಣರು 12ನೇ ಶತಮಾನದಲ್ಲಿ ಹಾಕಿಕೊಟ್ಟ ಮಾರ್ಗವೇ ಪ್ರೇರಣೆ ಎಂದು ವಿಶ್ಲೇಷಿಸಿದರು. ಬಸವಣ್ಣನವರ ತತ್ವಕ್ಕೆ ಮರುಳಾಗಿ ದೂರದ ಅಫ್‍ಘಾನಿಸ್ಥಾನದಿಂದ ಬಂದ ಸೂಫಿ ಸಂತರೊಬ್ಬರು ಅನುಭವಮಂಟಪಕ್ಕೆ ಬಂದು ನಂತರ ಮರುಳಶಂಕರದೇವ ಎಂಬ ನಾಮಾಂಕಿತದಿಂದ ಸಮಾಜದ ಕೆಲಸಕ್ಕೆ ಮುಂದಾಗಿದ್ದನ್ನು ಈ ಸಂದರ್ಭ ಸ್ಮರಿಸಿದರು.
ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ವಹಿಸಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿಯೇ ವೈಜ್ಞಾನಿಕ ಸತ್ಯವನ್ನು ಶರಣರು ಕೊಟ್ಟಷ್ಟು ಪರಿಣಾಮಕಾರಿಯಾಗಿ ಬೇರೆ ಯಾರು ಕೊಡಲು ಸಾಧ್ಯವಾಗಿಲ್ಲ. 12ನೇ ಶತಮಾನ ಎನ್ನುವಂತಹದ್ದು ಪ್ರವಾಹದ ಎದುರು ಈಜುವ ಪರಿಸ್ಥಿತಿ ಬಸವಾದಿ ಶರಣರಿಗೆ ಆಗಿತ್ತು ಎಂದರು.
ಕೇವಲ 300 ವರ್ಷಗಳ ಇತಿಹಾಸವಿರುವ ಬ್ರಿಟನ್ ಸಾಮ್ರಾಜ್ಯ ನೀಡಿದ ವ್ಯವಸ್ಥೆಯನ್ನು ಪ್ರಜಾಪ್ರಭುತ್ವದ ತಾಯಿ ಎಂದು ಬಣ್ಣಿಸಲಾಗುತ್ತಿದೆ. ಆದರೆ ಅದಕ್ಕಿಂತ 600 ವರ್ಷಗಳ ಮುಂಚೆಯೇ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದರು. ಹೀಗಾಗಿ ಬಸವಾದಿ ಶರಣರು ನೀಡಿದ ಸಾಮಾಜಿಕ ವ್ಯವಸ್ಥೆಯನ್ನು "ಪ್ರಜಾಪ್ರಭುತ್ವದ ತಂದೆ' ಎಂದು ಕೊಂಡಾಡಿದರು.
ಬೌದ್ಧಧರ್ಮದ ಸಂಸ್ಥಾಪಕರಾದ ಗೌತಮ ಬುದ್ಧನನನು ಏಷ್ಯಾದ ಬೆಳಕು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇಡೀ ವಿಶ್ವಕ್ಕೆ ಮಾದರಿಯಾದ ಬಸವಣ್ಣನವರನ್ನು ವಿಶ್ವದ ಬೆಳಕು ಎಂದು ಹೇಳಬಹುದು. ಹೀಗಾಗಿಯೇ ಅವರನ್ನು ಜಗಜ್ಯೋತಿ ಬಸವಣ್ಣ ಎಂದು ಸಂಭೋಧಿಸುವುದು. ಇಂತಹ ದಿವ್ಯಚೇತನ ಕನ್ನಡಿಗರಾಗಿರುವುದು ಈ ರಾಜ್ಯಕ್ಕೆ ಹೆಮ್ಮೆ ತರುವ ವಿಚಾರ ಎಂದು ಬಣ್ಣಿಸಿದರು.
ಸಮಾರಂಭದ ಸರ್ವಾಧ್ಯಕ್ಷ ಪ್ರೊ.ಸಿ.ಎಂ.ಧರ್ಮಪ್ಪ, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ.ಮುರಳೀಧರ್, ರಾಜ್ಯ ಸರ್ಕಾರದ ನಿವೃತ್ತ ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಮಹೇಶ್, ಪ್ರಧಾನಕಾರ್ಯದರ್ಶಿ ಪ್ರೇಮ್‍ನಾಥ್, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂತರಾಜು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹದೇವಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಎಸ್.ಸುರೇಶ್, ಉದ್ಯಮಿ ಬಿ.ಎಸ್.ಸದಾನಂದ್, ಸೋಮವಾರಪೇಟೆ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ ಧರ್ಮೆಂದ್ರ ಉಪಸ್ಥಿತರಿದ್ದರು.







