ನಾಪೊಕ್ಲು: ನೂತನ ಗೋದಾಮು ಮತ್ತು ಸಹಕಾರ ಭವನದ ಕಟ್ಟಡ ಲೋಕಾರ್ಪಣೆ

ನಾಪೊಕ್ಲು,ಫೆ.25: ಸಹಕಾರಿ ಕ್ಷೇತ್ರದಲ್ಲಿ ರೈತರ ಧ್ವನಿ ಗಟ್ಟಿಯಾದಾಗ ಮಾತ್ರ ಸರಕಾರದ ಹಲವು ಸೌಲಭ್ಯಗಳುರೈತರನ್ನು ತಲುಪಲು ಸಾಧ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಮತ್ತು ಸಹಕಾರ ಭವನದ ಕಟ್ಟಡ ಲೋಕಾರ್ಪಣೆಗೊಲಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರಗಳು ರೈತರ ಬೆನ್ನೆಲುಬಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿವೆ ಎಂದು ಶ್ಲಾಘಿಸಿದರು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಬೇಕಾದರೇ ಗೋದಾಮುಗಳು ಅತ್ಯವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಕಾರ ಸಂಘಗಳ ಮೂಲಕ ಸುಲಭ ರೀತಿಯಲ್ಲಿ ರೈತರಿಗೆ ಸಾಲಸೌಲಭ್ಯಗಳು ದೊರೆಯುತ್ತಿದ್ದು, ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳವಂತೆ ಸಲಹೆ ನೀಡಿದರು. ಕಾರುಗುಂದದಲ್ಲಿ ಗೋದಾಮು ಮತ್ತು ಮಾರಾಟ ಮಳಿಗೆ ಲೋಕಾರ್ಪಣೆಗೊಳಿಸಲಾಗಿದ್ದು, ರೈತರಿಗೆ ಬೇಕಾದ ಕೃಷಿ ಸಲಕರಣೆ, ಗೊಬ್ಬರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಮಾರಾಟ ಮಳಿಗೆಯಲ್ಲಿ ಲಭ್ಯವಿದ್ದು, ರೈತರು, ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಂಘದ ಗೋದಾಮುಗಳುನ್ನು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸುನೀಲ್ ಸುಬ್ರಮಣಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿರಿಯರ ಶ್ರಮ ಮತ್ತು ಮುಂದಾಲೋಚನೆಯಿಂದಾಗಿ ಜಿಲ್ಲೆಯಲ್ಲಿ ಸಹಕಾರ ಸಂಘಗಳು ಭದ್ರವಾಗಿ ಬೇರೂರಿವೆ ಎಂದು ಹೇಳಿದರು. ರಾಜ್ಯದ ಕೆಲವು ಕಡೆಗಳ ಸಹಕಾರ ಸಂಘಗಳಲ್ಲಿ ದುರ್ಬಳಕೆ ನಡೆದಿರುವ ಪ್ರಕರಣಗಳು ನಡೆದಿವೆ. ಕೊಡಗಿನಲ್ಲಿ ಈ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, 1849ರಲ್ಲಿ ಇಂಗ್ಲೇಂಡಿನಲ್ಲಿ ಸಹಕಾರ ಚಳುವಳಿಗೆ ನಾಂದಿ ಹಾಡಲಾಯಿತು. ಜಿಲ್ಲೆಯಲ್ಲಿ 1905 ರ ಮೇ 22ರಂದು ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿಯಲ್ಲಿ ಮೊದಲ ಸಹಕಾರ ಸಂಘ ಪ್ರಾರಂಭವಾಯಿತೆಂದು ಸಹಕಾರ ಸಂಘಗಳ ಇತಿಹಾಸವನ್ನು ಮನು ಮುತ್ತಪ್ಪ ವಿವರಿಸಿದರು. ಕಾರುಗುಂದ ಸಹಕಾರ ಸಂಘ ಕಳೆದ 42 ವರ್ಷಗಳಲ್ಲಿ ಅಗಾಧವಾಗಿ ಬೆಳೆದಿದ್ದು, ಇದಕ್ಕೆ ಹಿರಿಯರ ನಿಸ್ವಾರ್ಥ ಸೇವೆ ಮತ್ತು ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯೇ ಕಾರಣ. ಜಿಲ್ಲೆಯ ಹಲವು ಸಹಕಾರ ಸಂಘಗಳು ಶತಮಾನೋತ್ಸವವನ್ನು ಕೂಡಾ ಆಚರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಮನು ಮುತ್ತಪ್ಪ ಶ್ಲಾಘಿಸಿದರು.
ಬೆಂಗಳೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೆ.ಬಿ.ಮಾದಯ್ಯ, ಎಪಿಎಂಸಿ ಸದಸ್ಯ ಬೆಪ್ಪುರನ ಮೇದಪ್ಪ ಮಾತನಾಡಿದರು. ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಪಂಡ ರ್ಯಾಲಿ ಮಾದಯ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಸಂಘದ ನಿರ್ದೇಶಕರಾದ ಪೊಡನೋಳಂಡ ಬೊಳ್ಳವ್ವ ಮತ್ತು ಅಯ್ಯಗಡೇರ ಯು. ಜಾನಕಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಘದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಪಟ್ಟಮಾಡ ನಾಣಯ್ಯ, ಪೊಡನೋಳಂಡ ಸುಬ್ಬಯ್ಯ, ತೇಲಪಂಡ ಈ. ಅಪ್ಪಯ್ಯ, ಬಿದ್ದಂಡ ಎಸ್. ಕಾಳಪ್ಪ, ಕೊಡಪಾಲು ಎಸ್. ಗಣಪತಿ, ತೇಲಪಂಡ ಎಂ.ನಂಜಪ್ಪ, ಕೊಡಗನ ಮೊಣಪ್ಪ, ಅಜ್ಜೇಟ್ಟಿರ ಅಯ್ಯಪ್ಪ, ಗುತ್ತಿಗೆದಾರ ಅಹಮ್ಮದ್ ನಿಸಾರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಬಿದ್ದಂಡ ಸಿ.ಸುಬ್ಬಯ್ಯ, ತೋರೆರ ಯು.ಸತೀಶ್, ಬೊಳ್ಳಾರಪಂಡ ಪಿ.ಮಾದಪ್ಪ, ಕಲ್ಲುಮಾಡಂಡ ಅಶೋಕ್ಕುಟ್ಟಪ್ಪ, ಕೇಟೋಳಿ ಎಂ.ಲೋಕನಾಥ್, ಬಿ.ಎಂ.ಜಗದೀಶ್ ರೈ, ಹೆಚ್.ಎನ್.ಕೃಷ್ಣ, ಕೆ.ಎ.ಉದಯಕುಮಾರ್ ಮತ್ತೀತರರು ಉಪಸ್ಥಿತರಿದ್ದರು. ತಾ.ಪಂ.ಸದಸ್ಯ ಹಾಗೂ ಸಹಕಾರ ಸಂಘದ ನಿರ್ದೇಶಕ ಕೊಡಪಾಲು ಗಪ್ಪು ಗಣಪತಿ ಪ್ರಾರ್ಥಿಸಿ, ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ಟಿ.ಯು.ಕಾವೇರಮ್ಮ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಕೊಪ್ಪಡ ಸಿ. ತಿಮ್ಮಯ್ಯ ವಂದಿಸಿದರು.







