ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್- ಬಿಎಸ್‍ಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ: ಎನ್.ಮಹೇಶ್

ಕೊಳ್ಳೇಗಾಲ,ಫೆ.25: ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಅವರು ಹೇಳಿದರು.
ಪಟ್ಟಣದ ಎನ್.ಮಹೇಶ್ ಸೇವಾಕೇಂದ್ರದಲ್ಲಿ ಭಾನುವಾರ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಕುರುಬ ಸಮುದಾಯದ ಚಂದ್ರು, ಮುಸ್ಲಿಂ ಮುಖಂಡ ಷರೀಫ್, ಮಡಿವಾಳ ಮುಖಂಡ ಶೇಖರ್ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಯುವಕರನ್ನು ಸ್ವಾಗತಿಸಿ ನಂತರ ಅವರು ಮಾತನಾಡಿದರು.
ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹಾಗೂ ಜೆಡಿಎಸ್ ವರಿಷ್ಟರಾದ ದೇವೆಗೌಡರು ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಜನಪರ, ಜನಸ್ನೇಹಿ ಹಾಗೂ ಅಭಿವೃದ್ದಿ ಸರ್ಕಾರ ತರುವ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಯಾಗುವ ಮೂಲಕ ರಾಜ್ಯದಲ್ಲಿ 200 ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ 20 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ವರ್ಧೀಸಲಿದ್ದು, ಅದರಲ್ಲಿ ರಾಜ್ಯದಲ್ಲಿ 113 ಗೆಲುವ ಮೂಲಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಎರಡು ಪಕ್ಷಗಳ ಮೈತ್ರಿಯ ಹಿನ್ನಲೆಯಲ್ಲಿ ಬಿಎಸ್‍ಪಿ ಅಭ್ಯರ್ಥಿಗಳು ಸ್ಪರ್ಧಿಸುವಲ್ಲಿ ಜೆಡಿಎಸ್ ಕಾರ್ಯಕರ್ತರು ಮತಗಳನ್ನು ವರ್ಗಾವಣೆ ಮಾಡಲಿದ್ದಾರೆ. ಜೆಡಿಎಸ್ ಸ್ಪರ್ಧಿಸುವ ಕಡೆ ಬಿಎಸ್‍ಪಿ ಕಾರ್ಯಕರ್ತರು ಜೆಡಿಎಸ್‍ಗೆ ಮತಗಳನ್ನು ವರ್ಗಾವಣೆ ಮಾಡಲಿದ್ದಾರೆ ಎಂದು ಹೇಳಿದರು.
ಚಾ.ನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಹನೂರು ಕ್ಷೇತ್ರವನ್ನು ಹೊರತು ಪಡಿಸಿ ಮೂರು ಕ್ಷೇತ್ರಗಳಾದ ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಚಾ.ನಗರದಲ್ಲಿ ಬಿಎಸ್‍ಪಿ ಸ್ಪರ್ಧಿಸಲಿದೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿಯೆಂದು ಘೋಷಣೆಯಾಗಿದೆ. ಇನ್ನೂ ಉಳಿದ 19 ಕ್ಷೇತ್ರಗಳಲ್ಲಿ ಬಿಎಸ್‍ಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಟೌನ್ ಅಧ್ಯಕ್ಷ ಜಕಾವುಲ್ಲಾ, ನಗರಸಭೆ ಸದಸ್ಯ ರಾಮಕೃಷ್ಣ, ರಂಗಸ್ವಾಮಿ, ವಿಜಯ್‍ರಾಜ್, ಸೇರ್ಪಡೆಗೊಂಡ ಕುರುಬ ಸಮುದಾಯದ ಮಹದೇವ್, ರವಿ, ಕುಮಾರ್, ಗಣೇಶ್, ಬಾಲಗಣೇಶ್, ಶಾಂತು, ಚಂದ್ರು ಹಾಘೂ ಇನ್ನಿತರರು ಹಾಜರಿದ್ದರು.







