ಉಗ್ರವಾದದೆಡೆಗೆ ವಾಲುತ್ತಿರುವ ಶ್ರೀನಗರ ಕೇಂದ್ರ ಕಾರಾಗೃಹದ ಯುವಕರು

ಶ್ರೀನಗರ, ಫೆ. 25: ಅತ್ಯಧಿಕ ಭದ್ರತೆ ಹೊಂದಿರುವ ಶ್ರೀನಗರದ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳು ಹಾಗೂ ಪುಡಿ ರೌಡಿಗಳನ್ನು ಮೂಲಭೂತ ವಾದದ ಕಡೆಗೆ ಸೆಳೆಯಲಾಗುತ್ತಿದೆ. ಇದರೊಂದಿಗೆ ಇಲ್ಲಿನ ಕೈದಿಗಳಲ್ಲಿ ಸುಮಾರು 300ಕ್ಕೂ ಅಧಿಕ ಅನಧಿಕೃತ ಮೊಬೈಲ್ ಫೋನ್‌ಗಳಿವೆ. ಇದರಿಂದ ಈ ಜೈಲು ಕೈದಿಗಳ ಸ್ವರ್ಗವಾಗುತ್ತಿದೆ ಎಂದು ಅಧಿಕೃತ ವರದಿ ಹೇಳಿದೆ.
ಜಮ್ಮು ಹಾಗೂ ಕಾಶ್ಮೀರದ ಗೃಹ ಇಲಾಖೆಯೊಂದಿಗೆ ಕಾಲಕಾಲಕ್ಕೆ ವರದಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ಪ್ರವೃತ್ತಿ ಪರಿಶೀಲಿಸಲು ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಪಾಕಿಸ್ತಾನದ ನಿವಾಸಿ, ಲಷ್ಕರೆ ತಯ್ಯಿಬದ ಉಗ್ರ ಮುಹಮ್ಮದ್ ನವೀದ್ ಝಾಟ್ ಫೆಬ್ರವರಿ 6ರಂದು ಇಬ್ಬರು ಪೊಲೀಸರಿಗೆ ಗುಂಡು ಹಾರಿಸಿ ಕೊಂದು, ಪೊಲೀಸರ ವಶದಿಂದ ಪರಾರಿಯಾದ ಬಳಿಕ ಈ ಜೈಲಿನಲ್ಲಿ ಆಂತರಿಕ ತನಿಖೆ ನಡೆಸಲಾಯಿತು. ಈ ಸಂದರ್ಭ ಇದು ಬೆಳಕಿಗೆ ಬಂದಿದೆ.
ರಾಜ್ಯ ಗೃಹ ಇಲಾಖೆಗೆ ಸಲ್ಲಿಸಲಾದ ಬೇಹುಗಾರಿಕೆ ವರದಿ ಪ್ರಕಾರ, ಶ್ರೀನಗರ ಕಾರಾಗೃಹದ ಆವರಣದಲ್ಲಿ ಸುಮಾರು 300 ಮೊಬೈಲ್ ಫೋನ್‌ಗಳು ಕಾರ್ಯಾಚರಿಸುತ್ತಿವೆ. ಸಣ್ಣಪುಟ್ಟ ಅಪರಾಧ ಎಸಗಿ ಜೈಲಿಗೆ ಬರುವ ಯುವಕನ್ನು ಮೂಲಭೂತವಾದತ್ತ ಸೆಳೆಯಲಾಗುತ್ತಿವೆ.
ಎಸ್‌ಎಂಎಚ್‌ಎಸ್ ಆಸ್ಪತ್ರೆಯಿಂದ ಝಾಟ್ ನಾಟಕೀಯವಾಗಿ ಪರಾರಿಯಾದ ಬಳಿಕ ವರ್ಗಾವಣೆಗೊಂಡಿರುವ ಕಾರಾಗೃಹದ ಆಗಿನ ಪ್ರಧಾನ ನಿರ್ದೇಶಕ ಎಸ್.ಕೆ. ಮಿಶ್ರಾ ವರದಿಗೆ ಪ್ರತಿಕ್ರಿಯಿಸಿ, ಕಾರಾಗೃಹದಲ್ಲಿ ಇಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಸ್ಥಾಪಿಸಿದ ಮೊಬೈಲ್ ಜಾಮರ್ ಕಾರ್ಯಾಚರಿಸುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ರಾಜ್ಯ ಗೃಹ ಇಲಾಖೆಗೆ ವರದಿ ಮಾಡಲಾಗಿದೆ. ಆದರೆ, ಕಾರಾಗೃಹದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ಸ್ವೀಕರಿಸಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.







