ಪಶ್ಚಿಮ ಬಂಗಾಳ: ವಿವಾದಕ್ಕೆ ಕಾರಣವಾದ ಬಣ್ಣಸಂಹಿತೆ
ಕೊಲ್ಕತ್ತಾ, ಫೆ.26: ಪಶ್ಚಿಮ ಬಂಗಾಳದಲ್ಲಿ ಎಲ್ಲ ಶಾಲೆಗಳಿಗೆ ನೀಲಿ ಮತ್ತು ಬಿಳಿ ಬಣ್ಣವನ್ನು ಬಳಿಯಬೇಕು ಎಂಬ ಹೊಸ ಆದೇಶ ರಾಜ್ಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ.
ಎಲ್ಲ ಶಾಲೆಗಳಿಗೆ ಒಂದೇ ಬಣ್ಣ ಇರಬೇಕು ಎಂಬ ದೃಷ್ಟಿಯಿಂದ ಮಮತಾ ಬ್ಯಾನರ್ಜಿ ಸರ್ಕಾರ ಈ ಆದೇಶ ಹೊರಡಿಸಿದೆ. 20 ದಿನಗಳಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಇದು ಜಾರಿಯಾಗಬೇಕು ಎಂದು ಸರ್ಕಾರ ಗಡುವು ವಿಧಿಸಿದೆ. ಇದಕ್ಕಾಗಿ 500 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ.
ರಾಮಕೃಷ್ಣ ಮಿಷನ್ ಶಾಲೆಗಳು ಮತ್ತು ಇತರ ಹಲವು ಸಂಘಸಂಸ್ಥೆಗಳು ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಸಂಘ ಪರಿವಾರದ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೇಸರಿ ಬಣ್ಣ ಅಳಿಸುವ ಪ್ರಯತ್ನ ಇದು ಎಂದು ವಿರೋಧಿಗಳು ಬಣ್ಣಿಸಿದ್ದಾರೆ. ಆದರೆ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಎಲ್ಲ ಶಾಲೆಗಳಿಗೆ ಸಮಾನ ಬಣ್ಣ ಇರಬೇಕು ಎಂಬ ದೃಷ್ಟಿಯಿಂದ ಬಣ್ಣ ಸಂಹಿತೆಗೆ ಆದೇಶಿಸಲಾಗಿದೆ ಎಂದು ಹೇಳಿಕೊಂಡಿದೆ.
Next Story