ಸರಕಾರಿ ಪ್ರಶ್ನೆ ಪತ್ರಿಕೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ - 'ಆಝಾದ್ ಕಾಶ್ಮೀರ' ಹೇಗಾಯಿತು ?

ಜಮ್ಮು,ಫೆ.26 : ಜಮ್ಮು ಕಾಶ್ಮೀರ ಸರ್ವಿಸ್ ಸೆಲೆಕ್ಷನ್ ರಿಕ್ರೂಟ್ಮೆಂಟ್ ಬೋರ್ಡ್ (ಎಸ್‍ಎಸ್‍ಆರ್ ಬಿ ) ಪರೀಕ್ಷೆಗಳಿಗೆ ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯಲ್ಲಿನ ಪತ್ರಿಕೆಯೊಂದು ಆಶ್ಚರ್ಯ ಹುಟ್ಟಿಸಿತ್ತು. ಪ್ರಶ್ನೆಯೊಂದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು 'ಆಝಾದ್ ಕಾಶ್ಮೀರ್' ಎಂದು ಬಣ್ಣಿಸಲಾಗಿತ್ತು.
ವಾಸ್ತವವಾಗಿ ಆಝಾದ್ ಕಾಶ್ಮೀರ್ ಎಂಬ ಪದವನ್ನು ಕಾಶ್ಮೀರದ ಬಗ್ಗೆ ಮಾತನಾಡುವಾಗಲೆಲ್ಲಾ ಪಾಕಿಸ್ತಾನ ಉಪಯೋಗಿಸುತ್ತದೆ. ಭಾರತ ಈ ಪದವನ್ನು ಎಂದಿಗೂ ಪ್ರಯೋಗಿಸಿಲ್ಲ. ಹೀಗಿರುವಾಗ ಭಾರತ ಸರಕಾರದ ಪ್ರಶ್ನೆಪತ್ರಿಕೆಯೊಂದರಲ್ಲಿ ಆಝಾದ್ ಕಾಶ್ಮೀರ ಪದ ಹೇಗೆ ಬಳಸಲಾಯಿತು ಎಂಬುದೇ ಈಗ ಪ್ರಶ್ನೆಯಾಗಿದೆ.
ಪ್ರಶ್ನೆ ಸಂಖ್ಯೆ 86 ಹೀಗಿತ್ತು - ಜಮ್ಮು ಕಾಶ್ಮೀರಕ್ಕೆ ಚೀನಾದೊಂದಿಗೆ ಉತ್ತರ ಹಾಗೂ ಪೂರ್ವದಲ್ಲಿ ಅಂತಾರಾಷ್ಟ್ರೀಯ ಗಡಿಯಿದ್ದು, ಗಡಿ ನಿಯಂತ್ರಣ ರೇಖೆಯು ಭಾರತವನ್ನು ಪಾಕಿಸ್ತಾನ ನಿಯಂತ್ರಿತ ಪ್ರದೇಶಗಳಾದ ಆಝಾದ್ ಪಾಕಿಸ್ತಾನ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನದಿಂದ ಪ್ರತ್ಯೇಕಿಸುವ ದಿಕ್ಕುಗಳು :
1. ಕ್ರಮವಾಗಿ ಉತ್ತರ ಹಾಗೂ ಈಶಾನ್ಯ
2. ಕ್ರಮವಾಗಿ ದಕ್ಷಿಣ ಹಾಗೂ ಆಗ್ನೇಯ
3. ಕ್ರಮವಾಗಿ ಪೂರ್ವ ಹಾಗೂ ಈಶಾನ್ಯ
4. ಕ್ರಮವಾಗಿ ಪಶ್ಚಿಮ ಹಾಗೂ ವಾಯುವ್ಯ
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈ ಪ್ರಶ್ನೆಗೆ ತಮ್ಮ ಆಕ್ಷೇಪ ಸೂಚಿಸಿ ಪರೀಕ್ಷೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಮಂಡಳಿಯ ಅಧ್ಯಕ್ಷ ಸಿಮ್ರನ್‍ದೀಪ್ ಸಿಂಗ್ ಪ್ರತಿಕ್ರಿಯಿಸಿ, ಪರೀಕ್ಷೆಯ ನಂತರ ಮನವಿ ಸಲ್ಲಿಸಬಹುದಾಗಿದ್ದು ಪ್ರಶ್ನೆಯೊಂದು ತಪ್ಪಾಗಿದ್ದರೆ ಅದನ್ನು ಸರಿಪಡಿಸಬಹುದು ಎಂದಿದ್ದಾರೆ. ಮಂಡಳಿಯ ಸದಸ್ಯರಿಗೆ ಪರೀಕ್ಷೆಗಿಂತ ಮುನ್ನ ಪ್ರಶ್ನೆ ಪತ್ರಿಕೆ ನೋಡುವ ಅವಕಾಶವಿಲ್ಲ ಎಂದೂ ಅವರು ತಿಳಿಸಿದ್ದಾರೆ. ಆದರೆ ಯಾವುದೇ ಪ್ರಶ್ನೆ ವಿವಾದಾತ್ಮಕವಾಗಿರಬಾರದೆಂದು ಮಂಡಳಿ ಆರಂಭದಲ್ಲೇ ಸೂಚಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.







