ಶ್ರೀದೇವಿ ಸಾವಿನ ಸುತ್ತ ಅನುಮಾನಕ್ಕೆ ತೆರೆ ಎಳೆದ ವಿಧಿವಿಜ್ಞಾನ ಪ್ರಯೋಗಾಲಯ

ಮುಂಬೈ, ಫೆ.26: ಬಾಲಿವುಡ್‌ನ ಹಿರಿಯ ನಟಿ ಶ್ರೀದೇವಿ ಹಠಾತ್ ನಿಧನದ ಬಗ್ಗೆ ಸಂಶಯದ ಹುತ್ತ ಬೆಳೆದಿತ್ತು. ಶ್ರೀದೇವಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸೋಮವಾರ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಸಾವಿನ ಸುತ್ತ ಅನುಮಾನಕ್ಕೆ ತೆರೆ ಬಿದ್ದಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಶ್ರೀದೇವಿಯ ಸಾವಿನ ಹಿಂದೆ ಯಾವುದೇ ಸಂಶಯಗಳಿಲ್ಲ. ಅವರು ಹೃದಯಸ್ತಂಭನದಿಂದಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಒಂದು ವೇಳೆ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ನಿಧನರಾದರೆ, ನಿಧನದ ಕಾರಣ ತಕ್ಷಣಕ್ಕೆ ತಿಳಿದುಬರುತ್ತದೆ. ಮೃತದೇಹವನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯೂ ಬೇಗನೆ ನಡೆಯುತ್ತದೆ. ಆದರೆ, ಒಂದು ವೇಳೆ ವ್ಯಕ್ತಿ ಆಸ್ಪತ್ರೆಯಿಂದ ಹೊರಗೆ ಸಾವನ್ನಪ್ಪಿದರೆ, ಅದೊಂದು ಸಹಜ ಸಾವಾಗಿದ್ದರೂ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರು ಮೊದಲಿಗೆ ಪ್ರಕರಣವನ್ನು ದಾಖಲಿಸಿದ ಬಳಿಕ ಸಾವಿನ ತನಿಖೆ ನಡೆಸುತ್ತಾರೆ. ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕೆ ವಿದೇಶಕ್ಕೆ ಕಳುಹಿಸಬೇಕಾಗಿದ್ದರೆ, ಸಹಜವಾಗಿ ಮತ್ತಷ್ಟು ಅಧಿಕೃತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’’ ಎಂದು ಗಲ್ಫ್‌ನಲ್ಲಿ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ವಾಸುದೇವ್ ರಾವ್ ಹೇಳಿದ್ದಾರೆ.





