ಭಾರತದ ಪೊಲೀಸರಲ್ಲಿ ಮಹಿಳೆಯರ ಪ್ರಮಾಣ ಎಷ್ಟು ?
ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚುತ್ತಿರುವಾಗ ಮಹಿಳಾ ಪೊಲೀಸರ ಸಂಖ್ಯೆ ಏನಾಗುತ್ತಿದೆ ನೋಡಿ

ಹೊಸದಿಲ್ಲಿ,ಫೆ.26: ಭಾರತದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಾ ಇದ್ದರೂ ದೇಶದ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ 7.28 ಆಗಿದೆ. ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಪ್ರಮಾಣ ಕನಿಷ್ಠ- ಅಂದರೆ ಶೇ 2.47ರಷ್ಟಿದೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ದೊರೆತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಜಮ್ಮು ಕಾಶ್ಮೀರದಲ್ಲಿ ಒಟ್ಟು ಪೊಲೀಸ್ ಸಿಬ್ಬಂದಿಯಲ್ಲಿ ಕೇವಲ ಶೇ 3.05ರಷ್ಟು ಮಹಿಳಾ ಪೊಲೀಸರಿದ್ದಾರೆ. ರಾಜ್ಯದಲ್ಲಿ 80,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿದ್ದಾರೆಂದು ಗೃಹ ಸಚಿವಾಲಯದ ಮಾಹಿತಿ ತಿಳಿಸುತ್ತದೆ.
ಪೊಲೀಸ್ ಸೇವೆಯಲ್ಲಿರುವ ಮಹಿಳೆಯರ ಪ್ರಮಾಣ ನಗಣ್ಯವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರಕಾರಗಳಿಗೆ 2009, 2012 ಹಾಗೂ 2016ರಲ್ಲಿ ಸುತ್ತೋಲೆ ಕಳುಹಿಸಿ ಮಹಿಳಾ ಪೊಲೀಸರ ಪ್ರಮಾಣವನ್ನು ಶೇ. 33ಕ್ಕೆ ಏರಿಸಲು ಪ್ರಯತ್ನಿಸುವಂತೆ ತಿಳಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಮಹಿಳಾ ಪೇದೆಗಳ ಹಾಗೂ ಎಸ್ಸೈಗಳ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ ಅವುಗಳನ್ನು ತುಂಬುವಂತೆಯೂ ಇಲಾಖೆಗೆ ಸಲಹೆ ನೀಡಲಾಗಿದೆ.
ದೇಶದ ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮಹಿಳಾ ಪೊಲೀಸರ ಪ್ರಮಾಣ ಕೇವಲ ಶೇ 3.81 ಆಗಿದೆ. ರಾಜ್ಯದಲ್ಲಿ ಒಟ್ಟು 3.65 ಲಕ್ಷ ಪೊಲೀಸ್ ಸಿಬ್ಬಂದಿಗಳಿದ್ದಾರೆ. ತಮಿಳುನಾಡಿನಲ್ಲಿನ ಮಹಿಳಾ ಪೊಲೀಸರ ಪ್ರಮಾಣ ದೇಶದಲ್ಲಿಯೇ ಅತ್ಯಧಿಕವಾಗಿದೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢದಲ್ಲಿ ಅತ್ಯಧಿಕ ಸಂಖ್ಯೆಯ ಮಹಿಳಾ ಪೊಲೀಸರಿದ್ದಾರೆ. ಪಶ್ಚಿಮ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸರ ಪ್ರಮಾಣ ಶೇ 8.64 ಆಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಮೂರನೇ ಒಂದರಷ್ಟು ಕಾನ್ ಸ್ಟೇಬಲ್ ಹುದ್ದೆಗಳಿಗೆ ಮಹಿಳೆಯರನ್ನು ನೇಮಿಸುವ ಪ್ರಸ್ತಾಪವಿದ್ದು ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ್ ಹಾಗೂ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಶೇ. 15ರಷ್ಟು ಮಹಿಳಾ ಪೇದೆಗಳನ್ನು ನೇಮಿಸುವ ಪ್ರಸ್ತಾಪವಿದೆ.
ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು 2015ರಲ್ಲಿ 3,29,243 ಆಗಿದ್ದರೆ 2016ರಲ್ಲಿ ಅದು 3,38,954 ಆಗಿತ್ತು.







