ಮಡಿಕೇರಿ: ಅಂತರರಾಷ್ಟ್ರೀಯ ದಂತ ವೈದ್ಯಕೀಯ ವಿಚಾರ ಸಂಕಿರಣ ‘ಕ್ವೆಸ್ಟ್-2018’ ಫೆ.27 ರಂದು ಆರಂಭ

ಮಡಿಕೇರಿ, ಫೆ.26: ಅಂತರರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಂಸ್ಥೆ (ಐಡಿಯಾ) ಹಾಗೂ ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಮಟ್ಟದ ದಂತ ವೈದ್ಯಕೀಯ ವಿಚಾರ ಸಂಕಿರಣ ‘ಕ್ವೆಸ್ಟ್-2018’ ಫೆ.27 ಮತ್ತು 28ರಂದು ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಶಶಿಧರ್, ಮಾ.27ರ ಪೂರ್ವಾಹ್ನ 10ಗಂಟೆಗೆ ಜಪಾನ್‍ನ ಟ್ಸ್ರುಮಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಸತೋಶಿ ನಾಗಸಾಕ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದು, ಯುರೋಪಿಯನ್ ಮತ್ತು ಏಷ್ಯನ್ ವಿವಿಗಳಾದ ಬುದಾಪೆಸ್ಟ್, ಹಂಗೇರಿ,ಸಿಯೋಲ್, ದಕ್ಷಿಣ ಕೊರಿಯಾ, ಮಲೇಷಿಯಾ, ಜಪಾನ್ ಮುಂತಾದೆಡೆಯ ಸುಮಾರು 150ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಹೇಳಿದರು.
ಭಾರತದ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವೀಧರರು ಮಾತ್ರ ಸಂಶೋಧನೆಗಳನ್ನು ನಡೆಸುತ್ತಿದ್ದು, ಸ್ನಾತಕೋತ್ತರ ಪದವಿಗಿಂತ ಕೆಳಗಿನ ಹಂತದ ಪದವೀಧರರು ಸಂಶೋಧನೆಗಳನ್ನು ಕೈಗೊಳ್ಳುವುದು ಅತಿ ವಿರಳ. ಈ ಹಿನ್ನೆಲೆಯಲ್ಲಿ ಕೊಡಗು ದಂತ ವೈದ್ಯಕೀಯ ಸಂಸ್ಥೆ ವಿಶ್ವದಲ್ಲೇ ಪ್ರಥಮ ಬಾರಿಗೆ ಇಂತಹ ಒಂದು ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಆ ಮೂಲಕ ವಿಶ್ವದ ಗಮನಸೆಳೆಯುತ್ತಿದೆ ಎಂದು ನುಡಿದರು.
ಎರಡು ದಿನಗಳ ಈ ವಿಚಾರಸಂಕಿರಣದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ರಾಷ್ಟ್ರ ಹಾಗೂ ಅಂತರರಾಷ್ಟ್ರಿಯ ಮಟ್ಟದ ಸುಮಾರು 600ಕ್ಕೂ ಅಧಿಕ ಮಂದಿ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಕೆಲವರು ನೇರವಾಗಿ ಪ್ರಬಂಧಗಳನ್ನು ಮಂಡಿಸಿದರೆ ಮತ್ತೆ ಕೆಲವರು ಅಂಚೆ ಮೂಲಕವೂ ತಮ್ಮ ಪ್ರಬಂಧಗಳನ್ನು ಕಳುಹಿಸಿಕೊಡಲಿದ್ದಾರೆ ಎಂದು ತಿಳಿಸಿದರು.
ವಿಚಾರಸಂಕಿರಣದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸಂಶೋಧಕರು ಉಪನ್ಯಾಸ ನೀಡಲಿದ್ದು, ಯುವ ಜನಾಂಗವನ್ನು ವೈಜ್ಞಾನಿಕ ಸಂಶೋಧನೆಯ ಕಡೆಗೆ ಸೆಳೆಯಲಿದ್ದಾರೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನಿದ್ರಾವಸ್ಥೆಯಲ್ಲೇ ಅಸು ನೀಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿದ್ರಾವಸ್ಥೆಯಲ್ಲಿ ಉಸಿರಾಟದ ತೊಂದರೆಯಿಂದ ಶೇ. 24-30ರಷ್ಟು ಮಂದಿ ಸಾವಿಗೀಡಾಗುತ್ತಿರುವುದು ಕಳೆದ ಮೂರು ತಿಂಗಳಲ್ಲಿ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ ಎಂದು ಡಾ.ಶಶಿಧರ್ ಹೇಳಿದರು.
ಈ ಹಿನ್ನೆಲೆಯಲ್ಲಿ ಕೊಡಗು ದಂತ ವೈದ್ಯಕೀಯ ಸಂಸ್ಥೆಯು ‘ಸ್ಲೀಪ್ ಡಿಸೋರ್ಡರ್ ಬ್ರೇದಿಂಗ್’ ಕೇಂದ್ರವನ್ನು ವೀರಾಜಪೇಟೆಯ ಕಂಜಿತಂಡ ಕುಶಾಲಪ್ಪ ಕ್ಯಾಂಪಸ್‍ನಲ್ಲಿ ಆರಂಭಿಸಲಾಗುತ್ತಿದ್ದು, ಫೆ. 27ರ ಪೂರ್ವಾಹ್ನ 11 ಗಂಟೆಗೆ ಬೆಂಗಳೂರಿನ ಏರ್‍ಫೋರ್ಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‍ನ ಮುಖ್ಯಸ್ಥರಾದ ಏರ್ ಕಮಾಂಡರ್ ಬಾಲಕೃಷ್ಣ ಜಯನ್ ಅವರು ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.







