ಬೆಂಗಳೂರು: ನಲಪಾಡ್ ಹಲ್ಲೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಧರಣಿ
ಬೆಂಗಳೂರು, ಫೆ.26: ವಿದ್ವತ್ ಎಂಬಾತನ ಮೇಲೆ ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಹಲ್ಲೆ ನಡೆಸಿರುವ ಗಂಭೀರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿ ಇಂಡಿಯನ್ ಲಿಬರಲ್ ಅಂಡ್ ರೆವಲ್ಯೂಷನರಿ ಸಿಟಿಜನ್ಸ್ ಆಫ್ ಕರ್ನಾಟಕ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ವಿದ್ವತ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮುಹಮ್ಮದ್ ನಲಪಾಡ್, ಶಾಸಕರಾಗಿರುವ ತಂದೆಯ ಪ್ರಭಾವದಿಂದ ಪಾರಾಗುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವಿನಯ್‌ಕುಮಾರ್, ಯುಬಿಸಿಟಿಯ ಫೆರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಸೇರಿ ಏಳು ಜನರ ಗುಂಪು ವಿದ್ವತ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದ ನಿಜಾಂಶ ಹೊರಬರಬೇಕಾದರೆ ಸಿಬಿಐ ತನಿಖೆ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.





