ಬಿಜೆಪಿ ಮುಖಂಡರಿಂದ ಪಾಠ ಕಲಿಯಬೇಕಿಲ್ಲ: ರಾಮಲಿಂಗಾರೆಡ್ಡಿ
"ನಲಪಾಡ್ ವಿರುದ್ಧ ಕಟ್ಟುನಿಟ್ಟಿನ ಕ್ರಮ"

ಬೆಂಗಳೂರು, ಫೆ. 26: ‘ಮೊಹಮ್ಮದ್ ನಲಪಾಡ್ ಹಾಗೂ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರಿಂದ ಪಾಠ ಕಲಿಯಬೇಕಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೆಂದು ಅವರಿಗೆ ಯಾವುದೇ ವಿನಾಯಿತಿ ನೀಡಿಲ್ಲ. ಆದರೆ, ಅನಾವಶ್ಯಕವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.
ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಆ ರೀತಿಯಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದ ಅವರು, ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್, ಈಶ್ವರಪ್ಪ ಆಪ್ತ ವಿನಯ್ ಮೇಲೆ ಹಲ್ಲೆ ನಡೆಸಿದ. ಆದರೆ, ಆತನಿಗೆ ಪಕ್ಷದಲ್ಲಿ ಭಡ್ತಿ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ತನ್ನ ಕಾರ್ಯಕರ್ತರು ಹಾಗೂ ಮುಖಂಡರು ಹಲ್ಲೆ, ಗಲಾಟೆ ನಡೆಸಿದಾಗ ಅದನ್ನು ಖಂಡಿಸದ ಬಿಜೆಪಿ ಮುಖಂಡರು, ಇದೀಗ ನಮಗೆ ನೀತಿ ಪಾಠ ಹೇಳುತ್ತಿದ್ದಾರೆಂದ ರಾಮಲಿಂಗಾರೆಡ್ಡಿ, ಮೊಹಮ್ಮದ್ ನಲಪಾಡ್ ವಿರುದ್ಧ ರೌಡಿಶೀಟ್ ಹಾಕುವ ಬಗ್ಗೆ ಹಾಗೂ ಆತನ ಬಳಿ ಶಸ್ತ್ರಾಸ್ತ್ರಗಳಿರುವ ಬಗ್ಗೆಯೂ ಪರಿಶೀಲಿಸಲಿದ್ದಾರೆ ಎಂದರು.
ಮೊಹಮದ್ ನಲಪಾಡ್ ಕೆಪಿಸಿಸಿ ಬೆಂಗಳೂರು ನಗರ ಜಿಲ್ಲೆ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾನೆ. ಆತ ನಡೆಸಿದ ಕೃತ್ಯದಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ಮಾತ್ರವಲ್ಲ ಕೊಂಚ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎಲ್ಲ ಪ್ರಾಣಿ ಹತ್ಯೆ ನಿಷೇಧಿಸಿ: ‘ಗೋಹತ್ಯೆ ವಿಚಾರದ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ತಾಯಿಯ ಮಾಂಸ ತಿನ್ನಲಿ’ ಎಂದ ಆರೆಸೆಸ್ಸ್‌ನ ಕಲ್ಲಡ್ಕ ಪ್ರಭಾಕರ ಭಟ್, ಎಲ್ಲ ಪ್ರಾಣಿ ಹತ್ಯೆ ನಿಷೇಧಕ್ಕೆ ಹೋರಾಟ ಮಾಡಲಿ. ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
‘ನಮ್ಮಲ್ಲಿ ‘ಆ’ ಕೌಶಲವಿಲ್ಲ ಎನ್ನುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆಯವರು ನಮ್ಮ ಜನರಿಗೆ ವಿವಾಹದ ನಂತರ ಬರುವ ‘ಆ’ ಕೌಶಲ್ಯವನ್ನು ನೀಡಲಿ. ಆಗ ಎಲ್ಲರೂ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ’
-ರಾಮಲಿಂಗಾರೆಡ್ಡಿ ಗೃಹ ಸಚಿವ







