ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಅಗತ್ಯ: ಡಿ.ರೂಪಾ

ಬೆಂಗಳೂರು, ಫೆ.26: ಸ್ತನ ಕ್ಯಾನ್ಸರ್ ರೋಗದ ಲಕ್ಷಣಗಳ ಕುರಿತು ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಕರೆ ನೀಡಿದ್ದಾರೆ.
ಸೋಮವಾರ ನಗರದ ಹಲಸೂರಿನಲ್ಲಿರುವ ಗೃಹ ರಕ್ಷಕ ದಳದ ಕೇಂದ್ರ ಕಚೇರಿಯಲ್ಲಿ ನಾರಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ‘ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ನನಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಇನ್ನು ಗ್ರಾಮಾಂತರ ಪ್ರದೇಶದಲ್ಲಿನ ಬಡವರು, ಅವಿದ್ಯಾವಂತ ಮಹಿಳೆಯರ ಪರಿಸ್ಥಿತಿ ಏನು? ನಾರಿ ಫೌಂಡೇಶನ್‌ನವರು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕೆಲಸವನ್ನು ಮಾಡುತ್ತಿರುವುದು ಅಭಿನಂದನಾರ್ಹ ಎಂದು ರೂಪಾ ಹೇಳಿದರು.
ನೌರಿ ಫೌಂಡೇಶನ್ ಅಧ್ಯಕ್ಷೆ ಫಾತಿಮಾ ತಬಸ್ಸುಮ್ ಮಾತನಾಡಿ, ಸ್ತನ ಕ್ಯಾನ್ಸರ್ ರೋಗದ ಲಕ್ಷಣಗಳು ತಕ್ಷಣಕ್ಕೆ ಗೋಚರಿಸುವುದಿಲ್ಲ. ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಇದನ್ನು ತಡೆಗಟ್ಟಬಹುದು ಎಂದರು.
ಈ ರೋಗವು ಪ್ರಾಣಕ್ಕೆ ಆಪತ್ತನ್ನು ತರಬಹುದು. ಮಹಿಳೆಯರಿಗೆ ಈ ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ನಮ್ಮ ಕೆಲಸಕ್ಕೆ ತಜ್ಞ ವೈದ್ಯರು ನೆರವು ನೀಡುತ್ತಿದ್ದಾರೆ ಎಂದು ಫಾತಿಮಾ ತಬಸ್ಸುಮ್ ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯೂರ್ ಆಸ್ಪತ್ರೆಯ ಡಾ.ಹುಮೆರಾ, ನಾರಿ ಫೌಂಡೇಶನ್‌ನ ಪ್ರಮುಖ ನಯಾಝ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







